39 ವರ್ಷ ಸೇವೆ ಸಲ್ಲಿಸಿ ನಿವೃತ್ತರಾದ ನೆಚ್ಚಿನ ಗುರುವನ್ನು ಸನ್ಮಾನಿಸಿದ ಹಿರಿಯ ವಿದ್ಯಾರ್ಥಿಗಳು

3
Published on

ಮಂಡ್ಯ: ಮೂವತ್ತೊಂಬತ್ತು ವರ್ಷ ಶಿಕ್ಷಕರಾಗಿ ಸೇವೆ ನಿವೃತ್ತರಾದ ಎಸ್.ಲೋಕೇಶ್ ಅವರಿಗೆ ಚಿಕ್ಕಮಂಡ್ಯ ಸರ್ಕಾರಿ ಪ್ರೌಢಶಾಲೆಯ ಹಿರಿಯ ವಿದ್ಯಾರ್ಥಿಗಳು ಸನ್ಮಾನಿಸಿ ಗುರುವಂದನೆ ಸಲ್ಲಿಸಿದರು.

ಲೋಕೇಶ್ ಅವರ ಕುವೆಂಪುನಗರದಲ್ಲಿನ ನಿವಾಸಕ್ಕೆ ತೆರಳಿದ ಚಿಕ್ಕಮಂಡ್ಯ ಸರ್ಕಾರಿ ಪ್ರೌಢಶಾಲೆಯ ಎಸ್‌ಎಸ್‌ಎಲ್‌ಸಿಯ ಮೊದಲ ತಂಡದ ವಿದ್ಯಾರ್ಥಿಗಳು ನೆಚ್ಚಿನ ಶಿಕ್ಷಕನಿಗೆ ಪ್ರೀತಿ, ಗೌರವದಿಂದ ಸನ್ಮಾನಿಸಿ ಅಭಿನಂದಿಸಿದರು. 27 ವರ್ಷಗಳ ಹಿಂದಿನ ಶಾಲೆಯ ದಿನಗಳನ್ನು ಮೆಲುಕು ಹಾಕುತ್ತಾ ನೆನಪಿನಂಗಳಕ್ಕೆ ಜಾರಿದರು.

ಶಾಲೆಗಳಲ್ಲಿ ನಡೆಯುತ್ತಿದ್ದ ಪಾಠ-ಪ್ರವಚನ, ಮೂಲಸೌಕರ್ಯಗಳ ಕೊರತೆಯಿಂದ ಎದುರಿಸಿದ ಸವಾಲುಗಳು, ವಿದ್ಯಾರ್ಥಿಗಳ ಹಿಂದಿನ ನಡವಳಿಕೆಗಳು, ಪರೀಕ್ಷಾ ದಿನಗಳು, ಕಲಿಕಾ ಸಾಮರ್ಥ್ಯ, ಶಾಲಾ ದಿನಗಳ ತುಂಟತನ... ಹೀಗೆ ಹತ್ತಾರು ಸಂಗತಿಗಳೊಅದಿಗೆ ನೆನಪಿನ ಪುಟಗಳನ್ನು ತಿರುವು ಹಾಕಿದರು. ವಿಜ್ಞಾನ, ಗಣಿತದ ವಿಷಯಗಳು, ಪವಾಡ ರಹಸ್ಯ ಬಯಲು, ವಿಜ್ಞಾನ ಮಾದರಿಗಳ ಪ್ರದರ್ಶನದ ಬಗ್ಗೆ ತರ್ಕಬದ್ಧ ಚರ್ಚೆ ನಡೆಸಿದರು.

ಈ ವೇಳೆ ನಿವೃತ್ತ ಶಿಕ್ಷಕ ಲೋಕೇಶ್ ಅವರು ಮಾತನಾಡಿ, ಶಾಲಾ ದಿನಗಳಲ್ಲಿ ನಿಮಗೆ ಸಾಧ್ಯವಾದಷ್ಟು ಕಲಿಸುವ ಪ್ರಯತ್ನವನ್ನು ನಾವಲ್ಲಾ ಶಿಕ್ಷಕರು ಮಾಡಿದ್ದೇವೆ. ಈಗ ನಿಮ್ಮಗಳ ಸರದಿ. ನಿಮ್ಮ ಮಕ್ಕಳಿಗೆ ಸಂಸ್ಕಾರ, ಮೌಲ್ಯಗಳನ್ನು ತಿಳಿಸಿ. ಮಕ್ಕಳನ್ನು ಸನ್ಮಾರ್ಗದಲ್ಲಿ ನಡೆಯುವಂತೆ ಪ್ರೇರೇಪಿಸಿ. ಒಳ್ಳೆಯ ಶಿಕ್ಷಣ ಕೊಡಿ. ಸಮಯಕ್ಕೆ ಆದ್ಯತೆ ಕೊಡಿ. ಸಮಯಪಾಲನೆ ಮಾಡಿ. ನಿಮ್ಮ ಮಕ್ಕಳಿಗೂ ಅದನ್ನು ಕಲಿಸಿ ಎಂದು ಸಲಹೆ ನೀಡಿದರು.

ಶಿಕ್ಷಕ ಲೋಕೇಶ್ ಅವರ ಬಗ್ಗೆ ಹಿರಿಯ ವಿದ್ಯಾರ್ಥಿಗಳು ಅಭಿಮಾನದಿಂದ ಮಾತನಾಡಿದರು. ಅಂತಿಮವಾಗಿ ನೆನಪಿನ ಕಾಣಿಸಿ ನೀಡಿ, ಹಾರ-ಶಾಲು ಹೊದಿಸಿ ಗೌರವ ಸಮರ್ಪಣೆ ಮಾಡಿ ಗುರುವಂದನೆ ಸಲ್ಲಿಸಿದರು. ಕೇಕ್ ಕತ್ತರಿಸಿ ಹಂಚಿತಿನ್ನುವ ಮೂಲಕ ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಹಿರಿಯ ವಿದ್ಯಾರ್ಥಿಗಳಾದ ಕೇಶವ, ಸಿ.ಎಸ್.ದೇವರಾಜು, ಸಿ.ಡಿ.ರಾಜೇಶ್, ನವೀನ್, ಸತೀಶ್, ಸಿ.ಎಚ್.ಶಿವಕುಮಾರ್, ಸಿ.ಎಸ್.ಉಮೇಶ್, ಸಿ.ಕೆ.ಜ್ಯೋತಿ, ಎಚ್.ಎನ್.ಲತಾಮಣಿ, ಸಿ.ಕೆ.ನಾಗಮಣಿ, ರತ್ನಮ್ಮ, ತಾಯಮ್ಮ ಪ್ರತಿಭಾ, ಸಿ.ಪಿ.ಶಿಲ್ಪ, ಪುನೀತಾ ಇತರರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net