

ಕಮಲನಗರ: ಕೋವಿಡ್‌ನಿಂದ ಬಹಳಷ್ಟು ಮಂದಿಗೆ ಆಮ್ಲಜನಕ ಕೊರತೆ ಉಂಟಾಗಿ ಸಾಕಷ್ಟು ಸಂಕಷ್ಟ ಅನುಭವಿಸಬೇಕಾಯಿತು. ಆಮ್ಲಜನಕ ನಮಗೆ ಎಷ್ಟು ಮುಖ್ಯ ಎನ್ನುವುದನ್ನು ಕೋವಿಡ್ ಕಲಿಸಿಕೊಟ್ಟಿದೆ. ಇನ್ನಾದರೂ ಪ್ರತಿಯೊಬ್ಬರೂ ಸಸಿ ನೆಟ್ಟು ಪೋಷಣೆಯಲ್ಲಿ ಆಸಕ್ತಿ ತೋರಬೇಕು. ಇಡೀ ಜೀವ ಸಂಕುಲವನ್ನು ಪರಿಸರವೇ ಪೋಷಿಸುತ್ತಿದೆ ಎಂಬುದನ್ನು ಯಾರೂ ಮರೆಯಬಾರದು ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಮಾಣಿಕರಾವ ಪಾಟೀಲ್ ಹೇಳಿದರು.
ಬಳತ್(ಬಿ) ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ತಾಪಂ ಮತ್ತು ಸಾಮಾಜಿಕ ಅರಣ್ಯ ಇಲಾಖೆ ಸಹಯೋಗದಡಿ ಶುಕ್ರವಾರ ಏರ್ಪಡಿಸಿದ್ದ ತಾಯಿ ಹೆಸರಿನಲ್ಲಿ ಒಂದು ವೃಕ್ಷ ಕಾರ್ಯಕ್ರಮ ಉದ್ಘಾಟಿಸಿದ ಅವರು, ಪ್ರತಿಯೊಂದು ಮರದಿಂದ ನಮಗೆ ಯಥೇಚ್ಚ ಆಮ್ಲಜನಕ ಸಿಗುತ್ತದೆ. ಪರಿಸರ ಕಾಳಜಿಗಷ್ಟೇ ಸೀಮಿತವಾಗದೆ ಹವ್ಯಾಸವಾಗಿ ರೂಪುಗೊಳ್ಳಬೇಕು ಎಂದರು.
ತಾಪಂ ಸಹಾಯಕ ನಿರ್ದೇಶಕ ಹಣಮಂತರಾಯ ಕೌಟಗೆ ಮಾತನಾಡಿ, ಹಿಮನದಿ, ಚಂಡಮಾರುತ, ಭೂಕಂಪದಂಥ ಪ್ರಾಕೃತಿಕ ದುರಂತಗಳು ಭೂಮಿ ತಾಪಮಾನದ ವ್ಯತ್ಯಾಸದಿಂದ ಘಟಿಸುತ್ತಿವೆ. ಒಂದೆಡೆ ಅರಣ್ಯ ನಾಶ, ಇನ್ನೊಂದೆಡೆ ಹೆಚ್ಚುತ್ತಿರುವ ವಾಹನಗಳ ಬಳಕೆ. ಹೀಗೆ ಮಾನವನ ತಪ್ಪುಗಳಿಂದಲೇ ಇಂದು ಭೂಮಿ ಅಪಾಯಕ್ಕೆ ಸಿಲುಕಿದ್ದು, ಸಂರಕ್ಷಣೆಗಾಗಿ ಪ್ರತಿಯೊಬ್ಬರೂ ಸಸಿ ನೆಡಲು ಮುಂದಾಗಬೇಕು ಎಂದು ಸಲಹೆ ನೀಡಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಸಂಜೀವಕುಮಾರ ಗೌಡಪ್ಪ, ಉಪ ವಲಯ ಅರಣ್ಯಾಧಿಕಾರಿ ನಾಗೇಂದ್ರ ಸಿಂಗೋಡೆ, ಗಸ್ತು ಅರಣ್ಯ ಪಾಲಕ ಜಯಕುಮಾರ ಆನಂದಹಳ್ಳಿ, ತಾಪಂ ಸಿಬ್ಬಂದಿ ವಿರೂಪಾಕ್ಷಿ, ಅರ್ಜುನ, ಐಇಸಿ ಸಂಯೋಜಕಿ ಸವಿತಾ ಬನಾಳೆ, ಡಾಟಾ ಆಪರೇಟರ್ ಸಂಜೀವಕುಮಾರ ಇತರರಿದ್ದರು.
ಸಸಿಗಳನ್ನು ನೆಡುವುದು ಮುಖ್ಯವಲ್ಲ, ಪೋಷಣೆ ಬಹಳ ಮುಖ್ಯ. ಪ್ರತಿವರ್ಷ ನಾವು ಸಸಿಗಳನ್ನು ನೆಡುತ್ತೇವೆ. ಆದರೆ ಗಿಡಗಳ ಸಂಖ್ಯೆ ಹೆಚ್ಚಾಗುತ್ತಿಲ್ಲ. ಗಿಡ-ಮರಗಳ ಸಂರಕ್ಷಣೆಗೆ ಮೊದಲ ಆದ್ಯತೆ ಆಗಬೇಕು. ಹಸಿರು ಉಳಿದರೆ ಮಾತ್ರ ಉಸಿರು ಉಳಿಯುತ್ತದೆ.
| ಮಾಣಿಕರಾವ ಪಾಟೀಲ್ ತಾಪಂ ಇಒ