

ಯಲ್ಲಾಪುರ: ಪಟ್ಟಣದ ಎಪಿಎಂಸಿ ಬಳಿ ರಸ್ತೆಯ ಪಕ್ಕ ನಿಲ್ಲಿಸಿಟ್ಟ ಕಾರಿನ ಮೇಲೆ ಮರವೊಂದು ಬಿದ್ದು ಕಾರ್ ಜಖಂಗೊಂಡಿದೆ.
ಕಾರಿನಲ್ಲಿ ಜನ ಯಾರೂ ಇಲ್ಲದೇ ಇರುವುದರಿಂದ ಸಂಭಾವ್ಯ ಅಪಾಯ ತಪ್ಪಿದೆ. ಮರ ವಿದ್ಯುತ್ ಲೈನ್ ಮೇಲೆ ಬಿದ್ದು,ವಿದ್ಯುತ್ ಕಂಬ ಹಾಗೂ ಹೊಸದಾಗಿ ಅಳವಡಿಸಿದ್ದ ಬೀದಿ ದೀಪದ ಕಂಬಗಳಿಗೆ ಹಾನಿಯಾಗಿದೆ.
ಮರ ರಸ್ತೆಯ ಮೇಲೆ ಬಿದ್ದಿರುವುದರಿಂದ ಕೆಲಕಾಲ ವಾಹನಗಳ ಸಂಚಾರಕ್ಕೆ ಸಮಸ್ಯೆಯಾಯಿತು. ಅರಣ್ಯ ಇಲಾಖೆಯ ಸಿಬ್ಬಂದಿ ತಕ್ಷಣ ಆಗಮಿಸಿ ಮರ ತೆರವುಗೊಳಿಸಿದರು.
ಮನೆಗೆ ಹಾನಿ: ತಾಲೂಕಿನಲ್ಲಿ ಕಳೆದ ಒಂದು ವಾರದಿಂದ ಎಡೆಬಿಡದೆ ಸುರಿಯುತ್ತಿದ್ದ ಮಳೆ ಗುರುವಾರ ಕೊಂಚ ಬಿಡುವು ನೀಡಿದೆ.
ಉಮ್ಮಚಗಿ ಗ್ರಾ.ಪಂ ವ್ಯಾಪ್ತಿಯ ಹುಲ್ಲೋರಮನೆಯ ನಾಗ್ಯಾ ಸಿದ್ದಾ ಸಿದ್ದಿ ಎಂಬವರ ವಾಸ್ತವ್ಯದ ಮನೆಯ ಗೋಡೆಯು ಕುಸಿದಿದೆ.
ಕುಂದರಗಿ ಗ್ರಾಮಲೆಕ್ಕಾಧಿಕಾರಿ ಶರಣು ತುಂಬರ್ಗಿ ಸ್ಥಳಕ್ಕೆ ಭೇಟಿ ನೀಡಿ, ಹಾನಿಯನ್ನು ಪರಿಶೀಲಿಸಿದ್ದಾರೆ.