

ಬಾಳೆಹೊನ್ನೂರು: ಬಾಳೆಹೊನ್ನೂರು ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮೊದಲ ದಿನವೇ ಪುನರ್ವಸು ಮಳೆ ಅಬ್ಬರ ಹೆಚ್ಚಾಗಿದ್ದು, ಶನಿವಾರ ಧಾರಾಕಾರ ಮಳೆ ಸುರಿದಿದೆ.
ಶನಿವಾರ ಪುನರ್ವಸು ಮಳೆ ನಕ್ಷತ್ರದ ಮೊದಲ ದಿನವಾಗಿದ್ದು, ಬೆಳಗ್ಗಿನಿಂದಲೂ ಮಳೆ ಧಾರಾಕಾರವಾಗಿ ಸುರಿಯುತ್ತಿದೆ. ನಿರಂತರ ಮಳೆಯಿಂದ ಹಾನಬಾಳು- ಮುಡುಬ ರಾಜ್ಯ ಹೆದ್ದಾರಿಯ ಬಾಳೆಹೊನ್ನೂರಿನಿಂದ ಕಳಸ-ಹೊರನಾಡು, ಕೊಟ್ಟಿಗೆಹಾರ ಸಂಪರ್ಕ ಕಲ್ಪಿಸುವ ಮಾಗುಂಡಿ- ಜಕ್ಕಣಕ್ಕಿ ನಡುವೆ ಬೃಹತ್ ಮರ ಬಿದ್ದು ರಸ್ತೆ ಸಂಪರ್ಕ ಕಡಿತಗೊಂಡಿತ್ತು.
ಹೊರನಾಡು, ಧರ್ಮಸ್ಥಳ, ಕೊಟ್ಟಿಗೆಹಾರ, ಶೃಂಗೇರಿ, ರಂಭಾಪುರಿ ಪೀಠ ಸೇರಿದಂತೆ ಮುಂತಾದ ಕಡೆಗೆ ತೆರಳುವ ಪ್ರಯಾಣಿಕರು ಎರಡು ಗಂಟೆ ರಸ್ತೆಯಲ್ಲಿಯೇ ನಿಲ್ಲುವಂತಾಯಿತು. ಎರಡೂ ಬದಿಗಳಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದು, ಬೆಳಗ್ಗೆ ಏಳು ಗಂಟೆ ವೇಳೆಗೆ ಮರವನ್ನು ಯಂತ್ರದ ಮೂಲಕ ಕತ್ತರಿಸಿ ತೆರವುಗೊಳಿಸಲಾಯಿತು. ಬಳಿಕ ವಾಹನಗಳ ಸಂಚಾರ ಆರಂಭಗೊಂಡಿತು. ಮಳೆ ನಿರಂತರವಾಗಿ ಬರುತ್ತಿರುವ ಹಿನ್ನೆಲೆಯಲ್ಲಿ ಹಾಗೂ ಕುದುರೆಮುಖ, ಕಳಸ ಭಾಗದಲ್ಲೂ ಉತ್ತಮ ಮಳೆ ಸುರಿಯುತ್ತಿರುವ ಪರಿಣಾಮ ಪಟ್ಟಣದ ಭದ್ರಾನದಿಯಲ್ಲಿ ನೀರಿನ ಹರಿವು ಹೆಚ್ಚಳವಾಗಿದೆ.