

ಬೆಂಗಳೂರು: ಬಿಎಂಟಿಸಿ, ಕೆಎಸ್ಆರ್ಟಿಸಿ ಸೇರಿ ನಾಲ್ಕು ಸಾರಿಗೆ ನಿಗಮಗಳು ಸ್ವಂತ ಬಲದ ಮೇಲೆ 2030ರ ವೇಳೆಗೆ ಬಸ್ಗಳ ಸಂಖ್ಯೆಯನ್ನು 40 ಸಾವಿರಕ್ಕೆ ಹೆಚ್ಚಿಸಿಕೊಳ್ಳಬೇಕು ಎಂದು ನಿವೃತ್ತ ಐಎಎಸ್ ಅಧಿಕಾರಿ ಎಂ ಆರ್.ಶ್ರೀನಿವಾಸ ಮೂರ್ತಿ ನೇತೃತ್ವದ ಏಕ ಸದಸ್ಯ ಸಮಿತಿ ಸರ್ಕಾರಕ್ಕೆ ಶಿಫಾರಸು ಮಾಡಿದೆ.
ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮಂಗಳವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸಮಿತಿ ಮುಖ್ಯಸ್ಥ ಎಂ.ಆರ್.ಶ್ರೀನಿವಾಸ ಮೂರ್ತಿ, ನಾಲ್ಕು ಸಾರಿಗೆ ನಿಗಮಗಳ ಪುನಶ್ಚೇತನಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಅಧ್ಯಯನ ನಡೆಸಿದ ವರದಿ ಸಲ್ಲಿಸಿದರು.
ನಾಲ್ಕು ಸಾರಿಗೆ ನಿಗಮಗಳ ಒಟ್ಟು ಬಸ್ಗಳ ಸಂಖ್ಯೆ ಸದ್ಯಕ್ಕೆ 24 ಸಾವಿರದಷ್ಟಿದೆ. ಹೆಚ್ಚುತ್ತಿರುವ ಪ್ರಯಾಣಿಕರ ಸಂಖ್ಯೆ ಬೇಡಿಕೆ, ರಸ್ತೆಗಳ ನಿರ್ಮಾಣಕ್ಕೆ ತಕ್ಕಂತೆ ಬಸ್ಗಳ ವ್ಯವಸ್ಥೆ ಮಾಡಬೇಕಾಗಿದ್ದು, ಇದಕ್ಕಾಗಿ 2030ರ ವೇಳೆಗೆ ಬಸ್ಗಳ ಬಲವನ್ನು 40 ಸಾವಿರಕ್ಕೆ ಏರಿಸಬೇಕು.
ಹೊಸ ಬಸ್ಗಳ ಖರೀದಿಗೆ ಸರ್ಕಾರದ ಅನುದಾನವನ್ನು ಅವಲಂಬಿಸದೆ ಸ್ವಂತ ಆರ್ಥಿಕ ಸಂಪನ್ಮೂಲ ಹೊಂದಬೇಕು. ಇದಕ್ಕಾಗಿ ಕೈಗೊಳ್ಳಬೇಕಾದ ಆರ್ಥಿಕ ಸುಧಾರಣೆ ಕ್ರಮಗಳನ್ನು ಪ್ರಸ್ತಾಪಿಸಿದೆ. ಪ್ರತಿ ಬಸ್ಗೆ ಚಾಲಕ, ನಿರ್ವಾಹಕ ಇಬ್ಬರನ್ನು ನಿಯೋಜಿಸುವ ಬದಲಿಗೆ ಚಾಲಕನನ್ನು ಮಾತ್ರ ನಿಯೋಜಿಸಬೇಕು. ಮಾರ್ಗಗಳ ಪುನರ್ ರಚನೆ, ಸ್ಥಿರಾಸ್ತಿಗಳ ಸಮರ್ಪಕ ಬಳಕೆ ಸೇರಿ ಹಲವು ಉಪಕ್ರಮಗಳನ್ನು ಈ ಸಮಿತಿ ವಿವರಿಸಿದೆ ಎಂದು ಮೂಲಗಳು ಮಾಹಿತಿ ನೀಡಿವೆ.
ವರದಿ ಸ್ವೀಕರಿಸಿದ ಸಿಎಂ ಬೊಮ್ಮಾಯಿ, ಜು.22ರಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಿ ಸೂಕ್ತ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.