

ಬ್ಯಾಡಗಿ: ಅಪಘಾತ ತಡೆ, ವೇಗ ನಿಯಂತ್ರಣ, ಪಾದಚಾರಿಗಳ ಓಡಾಟಕ್ಕೆ ಅನುಕೂಲ ಕಲ್ಪಿಸಲು ಪಟ್ಟಣ ಪ್ರಮುಖ ವೃತ್ತಗಳಲ್ಲಿ ಅಳವಡಿಸಿರುವ ಟ್ರಾಫಿಕ್ ಸಿಗ್ನಲ್ಗಳು ಹಲವು ವರ್ಷಗಳಿಂದ ಸ್ಥಗಿತಗೊಂಡಿದ್ದು, ಬೆದರು ಗೊಂಬೆಗಳಂತೆ ಕಾಣುತ್ತಿವೆ.
ಪೊಲೀಸ್ ಇಲಾಖೆ ಹಾಗೂ ಸ್ಥಳೀಯ ಪುರಸಭೆ ಜಂಟಿಯಾಗಿ ಪಟ್ಟಣದ ಹಳೇ ಪುರಸಭೆ ಕಚೇರಿ ಹಾಗೂ ಸುಭಾಸ ವೃತ್ತದಲ್ಲಿ ವಾಹನಗಳಲ್ಲಿ ವಾಹನ ದಟ್ಟಣೆ ನಿಯಂತ್ರಣಕ್ಕಾಗಿ ಟ್ರಾಫಿಕ್ ಸಿಗ್ನಲ್ ವ್ಯವಸ್ಥೆ ಅಳವಡಿಸಿವೆ. ನಿತ್ಯವೂ 500ಕ್ಕೂ ಹೆಚ್ಚು ವಾಹನಗಳು ಇಲ್ಲಿ ಓಡಾಡುತ್ತಿವೆ. ಆದರೆ, ಇದಕ್ಕೆ ತಕ್ಕಂತೆ ರಸ್ತೆ, ವೃತ್ತಗಳನ್ನು ನಿರ್ವಿುಸಿಲ್ಲ. ಪರಿಣಾಮ ವಾಹನ ಚಾಲಕರು ಸಂಚಾರಿ ನಿಯಮ ಅನುಸರಿಸಲು ಸೂಕ್ತವಾದ ರಸ್ತೆಯಿಲ್ಲದೆ ನಿತ್ಯ ಪರದಾಡುತ್ತಿದ್ದಾರೆ. ಕಳೆದ ಎರಡ್ಮೂರು ವರ್ಷಗಳಲ್ಲಿ ಸಿಗ್ನಲ್ ಕಂಬಗಳಲ್ಲಿ ಕೆಂಪು, ಹಸಿರು, ಹಳದಿ ದೀಪ ಬೆಳಗಿದ್ದನ್ನು ಒಮ್ಮೆಯೂ ಸಾರ್ವಜನಿಕರು ಕಂಡಿಲ್ಲ.
ಕಳೆದ ಐದಾರು ವರ್ಷಗಳ ಹಿಂದೆ ಪುರಸಭೆಯ 15 ಲಕ್ಷ ರೂ. ಅನುದಾನದಲ್ಲಿ ಸಿಗ್ನಲ್ ಅಳವಡಿಸಿ, ಪೊಲೀಸ್ ಇಲಾಖೆಗೆ ಹಸ್ತಾಂತರಿಸಿತ್ತು. ಈ ಸಿಗ್ನಲ್ ಕಂಬಗಳು ಹಾಗೂ ದೀಪಗಳಿಗೆ ಜಾಡು ಕಟ್ಟಿದ್ದು, ಧೂಳಿನಿಂದ ಆವೃತವಾಗಿವೆ. ಹೀಗಾಗಿ, ವಾಹನಗಳು ಬೇಕಾಬಿಟ್ಟಿಯಾಗಿ ಸಂಚರಿಸುತ್ತಿವೆ. ಹೀಗಾದರೆ, ಸಿಗ್ನಲ್ ಕಂಬಗಳನ್ನು ಅಳವಡಿಸುವ ಅಗತ್ಯ ಏನಿತ್ತು, ಜನರ ತೆರಿಗೆ ಅನುದಾನ ಖರ್ಚು ಮಾಡಿದ್ದು ಏಕೆ, ಸಂಬಂಧಿಸಿದ ಅಧಿಕಾರಿಗಳು ಏಕೆ ಮೌನ ತಾಳಿದ್ದಾರೆ ಎಂದು ನಾಗರಿಕರು ಪ್ರಶ್ನಿಸುತ್ತಿದ್ದಾರೆ.
ಸಂಚಾರಿ ನಿಯಮ ಉಲ್ಲಂಘನೆ: ಪಟ್ಟಣದ ಮುಖ್ಯರಸ್ತೆ, ರಟ್ಟಿಹಳ್ಳಿ ರಸ್ತೆ, ಸ್ಟೇಷನ್ ರಸ್ತೆ, ಬಸ್ ನಿಲ್ದಾಣ, ಎಸ್ಜೆಜೆಎಂ ಶಾಲೆಯ ಎದುರು ಲಾರಿ ಹಾಗೂ ಟಾಟಾ ಏಸ್ ವಾಹನಗಳನ್ನು ಎಲ್ಲೆಂದರಲ್ಲಿ ನಿಲ್ಲಿಸಲಾಗುತ್ತಿದೆ. ವಾಹನಗಳಿಗೆ ನಿಷೇಧಿತ ಬಲ್ಬ್ ಅಳವಡಿಕೆ, ಬೈಕ್, ಲಾರಿ, ಕಾರ್ಗಳಿಗೆ ಕರ್ಕಶ ಹಾರ್ನ್ ಹಾಕಿಸುವುದು, ಲಾರಿಗಳಿಗೆ ನೆಲಕ್ಕೆ ತಾಗುವಂತೆ ಮ್ಯಾಟ್ ಹಾಕುವುದು ಸೇರಿದಂತೆ ಹಲವು ಕಾಯ್ದೆ ಮೀರಿ ವರ್ತನೆ ಮಾಡಿದರೂ ಪೊಲೀಸರು ದಂಡ ವಸೂಲಿ ಮಾಡುತ್ತಿಲ್ಲ. ಹೀಗಾಗಿ, ಚಾಲಕರು ಅಂಜಿಕೆಯಿಲ್ಲದೆ ಅಡ್ಡಾದಿಡ್ಡಿ ವಾಹನ ಓಡಿಸುತ್ತಿದ್ದಾರೆ.
ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಗೆ ಸಾವಿರಾರು ವಾಹನಗಳು ಬಂದು ಹೋಗುತ್ತಿವೆ. ಅಪಘಾತ ತಡೆ ಹಾಗೂ ವಾಹನಗಳ ನಿಯಂತ್ರಿಸಲು ಅಳವಡಿಸಿದ ಸಿಗ್ನಲ್ ಕಂಬಗಳು ಹಾಳು ಬಿದ್ದಿವೆ. ಚಾಲಕರು ವಾಹನಗಳನ್ನು ರಸ್ತೆಯ ಮೇಲೆ ನಿಲ್ಲಿಸುತ್ತಿದ್ದು, ಟ್ರಾಫಿಕ್ ಪೊಲೀಸರಿಲ್ಲದೆ ನಿತ್ಯ ನರಕಯಾತನೆ ಅನುಭವಿಸಬೇಕಿದೆ. ಮೂರು ತಿಂಗಳ ಹಿಂದೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸಂಬಂಧಿಸಿದ ಅಧಿಕಾರಿಗಳಿಗೆ ಟ್ರಾಫಿಕ್ ಸಿಬ್ಬಂದಿ ನೇಮಿಸಲು ಸೂಚಿಸಿದರೂ ಇಂದಿಗೂ ವ್ಯವಸ್ಥೆ ಸರಿಯಾಗಿಲ್ಲ. | ಚನ್ನಬಸಪ್ಪ ಶೆಟ್ಟರ್, ಸಾಮಾಜಿಕ ಕಾರ್ಯಕರ್ತ ಬ್ಯಾಡಗಿ ಪಟ್ಟಣದಲ್ಲಿ ವಾಹನಗಳ ದಟ್ಟಣೆ ತೀವ್ರವಾಗಿದೆ. ನಿಯಂತ್ರಣಕ್ಕಾಗಿ ಹಾವೇರಿಯಿಂದ ಟ್ರಾಫಿಕ್ ಸಿಬ್ಬಂದಿ ವಾರದಲ್ಲಿ 2 ದಿನ ಬಂದು ಹೋಗುತ್ತಿದ್ದಾರೆ. ರಸ್ತೆ ಮೇಲೆ ನಿಯಮ ಮೀರಿ ವಾಹನ ನಿಲ್ಲಿಸುವ ಚಾಲರಿಗೆ ದಂಡ ಹಾಕಿದ್ದೇವೆ. ಕೆಲ ಚಾಲಕರು ನಿರ್ಲಕ್ಷ್ಯ ತೋರುತ್ತಿದ್ದು, ಈ ಕುರಿತು ಮೇಲಧಿಕಾರಿಗಳ ಗಮನಕ್ಕೆ ತಂದು ಕ್ರಮಕ್ಕೆ ಮುಂದಾಗುತ್ತೇವೆ. | ಅರವಿಂದ ಬಿ.ಎಸ್., ಪಿಎಸ್ಐ