

ಮೈಸೂರು: ದಸರಾ ಮಹೋತ್ಸವದ ಅಂಗವಾಗಿ ಪುರಾತತ್ವ ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ, ಪ್ರವಾಸೋದ್ಯಮ ಇಲಾಖೆಯಿಂದ ನಗರದ ರಂಗಾಚಾರ್ಲು ಪುರಭವನ ಆವರಣದಲ್ಲಿ ಆಯೋಜಿಸಲಾಗಿದ್ದ ಪಾರಂಪರಿಕ ನಡಿಗೆ ಶುಕ್ರವಾರ ಚಾಲನೆ ನೀಡಲಾಯಿತು.
ಪಾರಂಪರಿಕ ಕಟ್ಟಡಗಳು, ದೇಗುಲಗಳು, ಮಸೀದಿಗಳು ಎಲ್ಲವೂ ರಾಜ, ಮಹಾರಾಜರ ಕಾಲದಲ್ಲಿ ನಿರ್ಮಾಣಗೊಂಡಿದ್ದು, ಇಂದಿಗೂ ಅವುಗಳು ಇತಿಹಾಸದ ಗುರುತನ್ನು ಸಾರುತ್ತವೆ. ಆದ್ದರಿಂದ ಅವುಗಳ ಸಂರಕ್ಷಣೆ ನಮ್ಮೆಲ್ಲರ ಹಕ್ಕು ಎನ್ನುವ ಸಂದೇಶ ಸಾರುವ ನಡಿಗೆಗೆ ನಗರಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸೀಫ್ ಅವರು ಹಸಿರು ನಿಶಾನೆ ತೋರಿದರು.
ಪ್ರಾಚೀನ ಸ್ಮಾರಕಗಳು ನಾಡಿನ ಸಂಪತ್ತಾಗಿವೆ. ಅವುಗಳನ್ನು ಅಂದಗೆಡಿಸಬೇಡಿ. ಅಲ್ಲದೇ ಇಂತಹ ಸ್ಮಾರಕಗಳನ್ನು ಜೂಜುಕಟ್ಟೆಯನ್ನಾಗಿಸಬೇಡಿ. ನಾಡಿನ ಸಾಂಸ್ಕೃತಿಕ ಸಂಪತ್ತು ಇವುಗಳನ್ನು ರಕ್ಷಿಸಿ, ಕಲಾ ದೇಗುಲಗಳು ನಮ್ಮ ನಾಡಿನ ಆಸ್ತಿಯಾಗಿದ್ದ್ದು ಅವುಗಳ ಸಂರಕ್ಷಣೆ ಕೇವಲ ಸರ್ಕಾರದ ಕೆಲಸ ಮಾತ್ರವಲ್ಲ, ಪ್ರತಿಯೊಬ್ಬ ನಾಗರಿಕರನ ಕರ್ತವ್ಯವೂ ಹೌದು ಎಂದು ಹೇಳಿದರು.
ಪ್ರಾಚೀನ ಸ್ಮಾರಕಗಳು ಇತಿಹಾಸದ ಪಠ್ಯ ಪುಸ್ತಕಗಳಿದ್ದಂತೆ. ಅಂತಹ ಕಲಾಕೃತಿಗಳ ಕಳ್ಳ ಸಾಗಣೆ ದೇಶ ದ್ರೋಹಕ್ಕೆ ಸಮ. ಶಿಲ್ಪಗಳಿಗೆ ಸುಣ್ಣ ಅಥವಾ ಎಣ್ಣೆಯನ್ನು ಹಚ್ಚುವುದು ತಪ್ಪು. ಇದರಿಂದ
ಸ್ಮಾರಕಗಳ ಮೂಲ ಸ್ವರೂಪ ಹಾಳಾಗುವುದು ಎನ್ನುವ ಎಚ್ಚರಿಕೆ ನೀಡಲಾಯಿತು.
ಕಾಪಾಡುವ ಹಕ್ಕು ನಮ್ಮದಾಗಲಿ:
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕರ್ನಾಟಕ ರಾಜ್ಯ ಮುಕ್ತ ವಿವಿ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ.ಶೆಲ್ವಪಿಳ್ಳೆ ಅಯ್ಯಂಗಾರ್ ಮಾತನಾಡಿ, ಸಾಮಾನ್ಯವಾಗಿ ನಾವೆಲ್ಲರೂ ಹಕ್ಕುಗಳ ಬಗ್ಗೆ ಮಾತನಾಡುತ್ತೇವೆ. ಆದರೆ ಪಾಲಿಸುವುದಿಲ್ಲ. ಹಾಗಾಗಿ ಮೊದಲಿಗೆ ನಮ್ಮ ಪರಂಪರೆ ಮತ್ತು ಪಾರಂಪರಿಕ ಕಟ್ಟಡಗಳನ್ನು ಕಾಪಾಡುವ ಹಕ್ಕು ನಮ್ಮದಾಗಿದ್ದು, ಹಕ್ಕುಗಳ ಜೊತೆಯಲ್ಲಿ ಪಾರಂಪರಿಕ ಕಟ್ಟಡಗಳನ್ನು ರಕ್ಷಿಸಬೇಕಿದೆ ಎಂದರು.
ಪುರಭವನಕ್ಕೆ ‘ನಿಯೋ ಕ್ಲಾಸಿಕಲ್ ಸ್ಟೈಲ್’ ಎಂಬ ಮತ್ತೊಂದು ಹೆಸರಿದ್ದು, 1884ರಲ್ಲಿ ರಂಗಚಾರ್ಲು ಅವರು ದಿವಾನರಾಗಿದ್ದ ಸಂದರ್ಭದಲ್ಲಿ ಕಟ್ಟಿಸಲಾಗಿರುತ್ತದೆ. ಹಾಗಾಗಿಯೇ ಈ ಕಟ್ಟಡ ವಿಶೇಷತೆಯಿಂದ ಕೂಡಿದ್ದು, ಸಿಮೆಂಟ್ ಬಳಸದೇ ನಿರ್ಮಿಸಲಾಗಿದೆ ಎಂದು ತಿಳಿಸಿದರು.
ರಂಗಚಾರ್ಲು ಅವರು ಬ್ರಿಟಿಷ್ ಸರ್ಕಾರದಲ್ಲಿ ಆಗುತ್ತಿದ್ದ ಅಕ್ರಮ ಕಂಡು ಹಿಡಿದು ಅದರ ಕುರಿತು ಪುಸ್ತಕ ಬಿಡುಗಡೆ ಮಾಡಿದ್ದರು. ಆ ಸಂದರ್ಭದಲ್ಲಿ ಇವರನ್ನು ಮೈಸೂರಿನ ದಿವಾನರಾಗಿ ಮಾಡಲಾಯಿತು. ಅಂತೆಯೇ ನಮ್ಮಲ್ಲಿರುವ ಎಲ್ಲ ಕಟ್ಟಡಗಳು 1880ರಿಂದೀಚೆಗೆ ಕಟ್ಟಿಸಲಾಗಿದ್ದು, ಅವುಗಳ ಸಂರಕ್ಷಣೆ ನಮ್ಮೆಲ್ಲರದ್ದಾಗಿದೆ ಎಂದರು.
ನಡಿಗೆ ಸಾಗಿದ ಹಾದಿ:
ಪುರಭವನದಿಂದ ಆರಂಭಗೊಂಡ ಪಾರಂಪರಿಕ ನಡಿಗೆ ದೊಡ್ಡ ಗಡಿಯಾರ, ಹತ್ತನೇ ಚಾಮರಾಜ ಒಡೆಯರ್ ವೃತ್ತ, ಅಂಬಾ ವಿಲಾಸ ಅರಮನೆ, ನಾಲ್ವಡಿ ಕೃಷ್ಣರಾಜ ಒಡೆಯರ್ ವೃತ್ತ, ಚಿಕ್ಕಗಡಿಯಾರ, ದೇವರಾಜ ಮಾರುಕಟ್ಟೆ ರಸ್ತೆ, ಕೃಷ್ಣರಾಜೇಂದ್ರ ಆಸ್ಪತ್ರೆ, ಸರ್ಕಾರಿ ಆಯುರ್ವೇದ ಕಾಲೇಜು ಮೂಲಕ ಹಾದು, ಚಾಮರಾಜೇಂದ್ರ ಟೆಕ್ನಿಕಲ್ ಇನ್ಸಿಟ್ಯೂಟ್ ಮುಖೇನ ಕಾವೇರಿ ಎಂಪೋರಿಯಂ ಮತ್ತು ಗಾಂಧಿ ವೃತ್ತದಿಂದ ಮರಳಿ ಪುರಭವನಕ್ಕೆ ಮರಳಿತು.
ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಆಯುಕ್ತ ದೇವರಾಜು, ಮಾನಸ ಗಂಗೋತ್ರಿ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗದ ನಿವೃತ್ತ ಪ್ರಾಧ್ಯಾಪಕ ಡಾ.ಎನ್.ಎಸ್.ರಂಗರಾಜು, ಉಪ ನಿರ್ದೇಶಕ ಡಾ.ಸಿ.ಎನ್. ಮಂಜುಳಾ, ಸಮಿತಿಯ ತಾರಕೇಶ್, ಅಂಬರೀಶ್ ಇತರರು ಇದ್ದರು.