

ಮುಂಡರಗಿ: ರಸಗೊಬ್ಬರ ಚೀಲ ಹಾಗೂ ಕ್ರಿಮಿನಾಶಕ ಔಷಧ ಹೊತ್ತು ಗುಮ್ಮಗೋಳ ಗ್ರಾಮಕ್ಕೆ ತೆರಳುತ್ತಿದ್ದಾಗ ಟ್ರಾಕ್ಟರ್ ಪಲ್ಟಿಯಾದ ಘಟನೆ ಶನಿವಾರ ಸಂಭವಿಸಿದೆ.
ಹಮ್ಮಿಗಿ-ಗುಮ್ಮಗೋಳ ಮಧ್ಯದ ಶಿಥಿಲಗೊಂಡಿರುವ ಕಿರು ಸೇತುವೆ ಮೇಲಿಂದ ಕುಸಿದು ಬಿದ್ದಿದ್ದರಿಂದ ರಸಗೊಬ್ಬರದ ಚೀಲಗಳು ನೀರಿನೊಳಗೆ ಮುಳುಗಿ ಹಾಳಾಗಿವೆ. ಘಟನೆಯಲ್ಲಿ ಮೂವರು ರೈತರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಮೊದಲೇ ಕಿರಿದಾಗಿರುವ ಈ ರಸ್ತೆ ಸುಮಾರು ನಾಲ್ಕು ವರ್ಷಗಳಿಂದ ಶಿಥಿಲಗೊಂಡಿದೆ. ಕೆಲ ತಿಂಗಳ ಕಾಲ ರಸ್ತೆ ಸಂಚಾರ ಬಂದ್ ಮಾಡಲಾಗಿತ್ತು. ನಂತರ ತಾತ್ಕಾಲಿಕವಾಗಿ ಗರಸು ಮಣ್ಣು ಹಾಕಿ ಸಂಚಾರಕ್ಕೆ ಅನುಕೂಲ ಮಾಡಲಾಗಿತ್ತು.
ಗುಮ್ಮಗೋಳ ರೈತರಾದ ಗೋಣಿಬಸಪ್ಪ ಜೋಗಿನ, ಕೋಟೆಪ್ಪ ಹುಳಿಸೊಪ್ಪಿನ, ರೇವಣಸಿದ್ದಪ್ಪ ಜೋಗಿನ ಅವರು ತಮ್ಮ ಜಮೀನಿನ ಬೆಳೆಗಳಿಗಾಗಿ 1.50 ಲಕ್ಷ ರೂ.ವೆಚ್ಚದ ರಸಗೊಬ್ಬರ, ಕ್ರಿಮಿನಾಶಕ ಔಷಧ ಸಂಗ್ರಹಿಸಿಕೊಂಡು ಹೂವಿನಹಡಗಲಿಯಿಂದ ಹಮ್ಮಿಗಿ ಮಾರ್ಗವಾಗಿ ಗುಮ್ಮಗೋಳಕ್ಕೆ ತೆರುಳುತ್ತಿದ್ದಾಗ ಎದುರಿಗೆ ಬಂದ ದ್ವಿಚಕ್ರ ವಾಹನಕ್ಕೆ ದಾರಿ ಮಾಡಿಕೊಡಲು ಪಕ್ಕಕ್ಕೆ ಸರಿದಾಗ ಟ್ರ್ಯಾಕ್ಟರ್ ಪಲ್ಟಿಯಾಗಿದೆ.
ಸ್ಥಳಕ್ಕೆ ದೌಡಾಯಿಸಿದ ಗ್ರಾಮಸ್ಥರು ರೈತರನ್ನು ಮೇಲಕ್ಕೆತ್ತಿ ಅಪಾಯದಿಂದ ಪಾರು ಮಾಡಿದ್ದಾರೆ. ಜೆಸಿಬಿ ಮೂಲಕ ಟ್ರ್ಯಾಕ್ಟರ್ ಅನ್ನು ಮೇಲಕ್ಕೆತ್ತಲಾಗಿದೆ. 100 ಚೀಲಗಳ ರಸಗೊಬ್ಬರ, ಕ್ರಿಮಿನಾಶಕ ಔಷಧ ನೀರು ಪಾಲಾಗಿವೆ. ಇದರಿಂದ ರೈತರು ತೀವ್ರ ನಷ್ಟ ಅನುಭವಿಸುವಂತಾಗಿದೆ.
ಶಾಸಕ ಡಾ.ಚಂದ್ರು ಲಮಾಣಿ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ‘ಈ ಬಗ್ಗೆ ಸಂಬಂಸಿದ ಅಕಾರಿಗಳ ಜತೆ ಚರ್ಚಿಸಿ ರಸ್ತೆ ಮೇಲೆ ಕಿರು ಸೇತುವೆ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.
ಹಮ್ಮಿಗಿ ಗ್ರಾ.ಪಂ.ಅಧ್ಯಕ್ಷ ಅಬಾಸಾಹೇಬ ಬಹದ್ದೂರದೇಸಾಯಿ, ಹೇಮಗಿರೀಶ ಹಾವಿನಾಳ, ಲಿಂಗರಾಜಗೌಡ ಪಾಟೀಲ ಇತರರು ಇದ್ದರು.