

ಯಲ್ಲಾಪುರ: ತಾಲೂಕಿನ ಅಣಲಗಾರ ಗೋಪಾಲಕೃಷ್ಣ ದೇವಸ್ಥಾನದ ಆವಾರದಲ್ಲಿ ಪಾವಂಜೆಯ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಕೃಪಾಪೋಷಿತ ಯಕ್ಷಗಾನ ಮಂಡಳಿಯ ಕಲಾವಿದರಿಂದ ಯಕ್ಷಗಾನ ಪ್ರದರ್ಶನ ನಡೆಯಿತು.
ಯಕ್ಷಧ್ರುವ ಪಟ್ಲ ಸತೀಶ ಶೆಟ್ಟಿ ನೇತೃತ್ವದಲ್ಲಿ ಕಲಾವಿದರು ದೇವಿ ಮಹಾತ್ಮೆ ಯಕ್ಷಗಾನ ಪ್ರಸಂಗವನ್ನು ಸುಂದರವಾಗಿ ಅಭಿನಯಿಸಿ ಪ್ರೇಕ್ಷಕರ ಮನ ಗೆದ್ದರು. ಅಪರೂಪಕ್ಕೆ ಈ ಭಾಗದಲ್ಲಿ ಪ್ರದರ್ಶನಗೊಂಡ ತೆಂಕುತಿಟ್ಟಿನ ಯಕ್ಷಗಾನ ಪ್ರದರ್ಶನಕ್ಕೆ ಸಾವಿರಾರು ಸಂಖ್ಯೆಯ ಪ್ರೇಕ್ಷಕರು ಸಾಕ್ಷಿಯಾದರು.
ಇದೇ ಸಂದರ್ಭದಲ್ಲಿ ಮೇಳದ ಸಂಚಾಲಕ ಸತೀಶ ಶೆಟ್ಟಿ ಅವರನ್ನು ಸಂಘಟನೆಯ ವತಿಯಿಂದ ಗೌರವಿಸಲಾಯಿತು. ಸಂಘಟಕ ನಾರಾಯಣ ಭಟ್ಟ ಬಿದ್ರೆಪಾಲ, ದೇವಸ್ಥಾನದ ಪುರೋಹಿತ ಡಾ. ಶಂಕರ ಭಟ್ಟ ಬಾಲೀಗದ್ದೆ ಇತರರಿದ್ದರು. ಪತ್ರಕರ್ತ ಜಿ.ಎನ್. ಭಟ್ಟ ತಟ್ಟಿಗದ್ದೆ ನಿರ್ವಹಿಸಿದರು.