ಮಕ್ಕಳ ದಿನಾಚರಣೆ ಸಿದ್ಧತೆಯಲ್ಲಿ ತೊಡಗಿದ್ದಾಗಲೇ ಘೋರ ಕೃತ: ಅಂಗನವಾಡಿ ಸಹಾಯಕಿಯ ಕತ್ತು ಕೊಯ್ದು ಕೊಲೆ

crime
Published on

ತಿಪಟೂರು: ಮಕ್ಕಳ ದಿನಾಚರಣೆ ಸಿದ್ಧತೆಯಲ್ಲಿ ತೊಡಗಿದ್ದ ಹಾಲ್ಕುರಿಕೆ ಅಂಗನವಾಡಿ ಸಹಾಯಕಿಯ ಕತ್ತು ಕೊಯ್ದು ಕೊಲೆ ಮಾಡಲಾಗಿದೆ.

ಅಂಗನವಾಡಿ ಸಹಾಯಕಿ ಭಾರತಿ (35) ಮೃತೆ. ಪತಿಯ ಅಕ್ಕನ ಮಗ ದಿವಾಕರ್​ (25) ಕೊಲೆ ಆರೋಪಿ. ಭಾನುವಾರ ಬೆಳಗ್ಗೆ ಅಂಗನವಾಡಿ ಕೇಂದ್ರದ ಹಿಂಭಾಗಕ್ಕೆ ಎಳೆದೊಯ್ದು ಕತ್ತು, ಎದೆ, ಗಂಟಲಿನ ಭಾಗಗಳಿಗೆ ಚಾಕುವಿನಿಂದ ಚುಚ್ಚಿ ಪರಾರಿಯಾಗಿದ್ದಾನೆ. ಆರೋಪಿ ಪತ್ತೆಗೆ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ.

ಅಂಗನವಾಡಿ ಸಹಾಯಕಿಯನ್ನು ದಿವಾಕರ್​ ಕೊಲೆ ಮಾಡುವಾಗ ತಡೆಯಲು ಬಂದವರಿಗೂ ಕೊಲೆ ಮಾಡುವುದಾಗಿ ಬೆದರಿಸಿ ಆರೋಪಿ ಪರಾರಿಯಾಗಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಭಾರತಿಗೆ ಇಬ್ಬರು ಮಕ್ಕಳಿದ್ದು, ಪತಿ ನಾಗರಾಜು ಮೃತಪಟ್ಟ ನಂತರ ಆತನ ಅಕ್ಕನ ಮಗ ದಿವಾಕರ್​ ಈಕೆಯ ಮನೆಯಲ್ಲೇ ಇದ್ದ. ದಿವಾಕರ್​ ಹಾಲ್ಕುರಿಕೆ ಸಮೀಪದ ಕುರಿಪಾಳ್ಯದ ಬಾಲಕಿಯನ್ನು ಮದುವೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಕ್ಸೋ ಕಾಯ್ದೆಯಡಿ 7 ತಿಂಗಳ ಜೈಲು ಶಿಕ್ಷೆ ಅನುಭವಿಸಿ ಒಂದೂವರೆ ವರ್ಷದ ಹಿಂದೆ ಬಿಡುಗಡೆ ಆಗಿದ್ದ. ಅತ್ತಿಗೆ ಮನೆಯಲ್ಲೇ ವಾಸವಿದ್ದ ದಿವಾಕರನ ದುರ್ವರ್ತನೆ ಸಹಿಸಲಾಗದೆ 15 ದಿನಗಳ ಹಿಂದೆ ಭಾರತಿ ಹೊನ್ನವಳ್ಳಿ ಠಾಣೆಯಲ್ಲಿ ದೂರು ನೀಡಿದ್ದರೆ. ಆದರೆ ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ ಎನ್ನಲಾಗಿದೆ. ಹೊನ್ನವಳ್ಳಿ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net