

* ಬೋನು ಅಳವಡಿಸಿ ಕಾರ್ಯಾಚರಣೆ
ವಿಜಯವಾಣಿ ಸುದ್ದಿಜಾಲ ಗುಂಡ್ಲುಪೇಟೆ
ತಾಲೂಕಿನ ಬೊಮ್ಮಲಾಪುರ ಸಮೀಪ ಜಮೀನಿನಲ್ಲಿ ಹಸುವನ್ನು ಕೊಂದುಹಾಕಿದ್ದ ಹುಲಿ ಪತ್ತೆಗೆ ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸಿದರೂ ಯಾವುದೇ ಸುಳಿವು ಸಿಕ್ಕಿಲ್ಲ. ಇದು ಅರಣ್ಯ ಇಲಾಖೆಗೆ ತಲೆಬಿಸಿಯಾಗಿದ್ದರೆ, ರೈತರ ಆತಂಕ ಮತ್ತಷ್ಟು ಹೆಚ್ಚಾಗಿದೆ.
ಸೋಮವಾರ ಮಧ್ಯಾಹ್ನ ಗ್ರಾಮದ ಗಂಗಪ್ಪ ಎಂಬುವರ ಜಮೀನಿನಲ್ಲಿ ಮೇಯುತ್ತಿದ್ದ ಹಸು ಮೇಲೆ ಹುಲಿ ದಾಳಿ ನಡೆಸಿ ಕೊಂದುಹಾಕಿತ್ತು. ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ತೆರಳಿದ ಅರಣ್ಯಾಧಿಕಾರಿಗಳು ಹುಲಿ ಚಲನವಲನ ಪತ್ತೆಗೆ ಕ್ಯಾಮರಾ ಹಾಗೂ ಸೆರೆಗೆ ಸ್ಥಳದಲ್ಲಿ ಬೋನು ಅಳವಡಿಸಿ ಮೇಕೆಯನ್ನು ಕೂಡಿಹಾಕಿದ್ದಾರೆ.
ಮಂಗಳವಾರ ಇಡೀ ದಿನ ಅರಣ್ಯ ಸಿಬ್ಬಂದಿ ಕೂಂಬಿಂಗ್ ನಡೆಸಿ ಡ್ರೋನ್ ಕ್ಯಾಮರಾ ಹಾರಿಸುವ ಮೂಲಕ ಪತ್ತೆ ಕಾರ್ಯಕ್ಕೆ ಮುಂದಾಗಿದ್ದರೂ ತೇವದ ಮಣ್ಣಿನಲ್ಲಿ ಮೂಡಿರುವ ಅದರ ಹೆಜ್ಜೆಯ ಗುರುತು ಮಾತ್ರ ಪತ್ತೆಯಾಗಿದೆ. ಹುಲಿ ನೆರೆಯ ಕುಂದಕೆರೆಯತ್ತ ಹೋಗಿರಬಹುದು ಎಂದು ಬಫರ್ ವಲಯದ ಪ್ರಭಾರ ವಲಯರಣ್ಯಾಧಿಕಾರಿ ಶಿವಕುಮಾರ್ ತಿಳಿಸಿದ್ದಾರೆ.
ಹುಲಿ ಪತ್ತೆಯಾಗದಿರುವುದು ಈ ಭಾಗದ ರೈತರ ಆತಂಕಕ್ಕೆ ಕಾರಣವಾಗಿದೆ. ಕಳೆದ ಹಲವಾರು ವರ್ಷಗಳಿಂದ ಈ ಭಾಗದಲ್ಲಿ ಸಂಚರಿಸುತ್ತಿರುವ ಹುಲಿ ಆಗಾಗ ಜಾನುವಾರುಗಳ ಮೇಲೆ ದಾಳಿ ಮಾಡಿ ಕೊಂದುಹಾಕುತ್ತಿದ್ದು ನಂತರ ಸ್ವಲ್ಪ ದಿನ ಕಣ್ಮರೆಯಾಗುತ್ತಿದೆ. ಆದ್ದರಿಂದ ಈ ಬಾರಿ ಅರಣ್ಯ ಇಲಾಖೆ ಹುಲಿಯನ್ನು ಸೆರೆಹಿಡಿದು ಕಾಡಿಗೆ ಬಿಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.