

ಮೈಸೂರು: ತಾಲೂಕಿನ ಚಿಕ್ಕಕಾನ್ಯ ವ್ಯಾಪ್ತಿಯಲ್ಲಿ ಹುಲಿಯನ್ನು ಸೆರೆ ಹಿಡಿಯಲು ಬುಧವಾರ ರಾತ್ರಿ ಅರಣ್ಯ ಇಲಾಖೆಯು ಬೇಟೆಗೆ ಇರಿಸಿದ್ದ ಪ್ರಾಣಿ ಯೊಂದನ್ನು ಹುಲಿ ಬೇಟೆಯಾಡಿದೆ.
ಚಿಕ್ಕಕಾನ್ಯ, ದೊಡ್ಡಕಾನ್ಯ, ಬ್ಯಾತನಹಳ್ಳಿ, ಸಿಂಧುವಳ್ಳಿ ಗ್ರಾಮದಲ್ಲಿ ಹುಲಿ ಸಂಚರಿಸುತ್ತಿದ್ದು, ಹುಲಿಯನ್ನು ಗ್ರಾಮಸ್ಥರು ಗಮನಿಸಿದ ನಂತರ ಅರಣ್ಯ ಇಲಾಖೆಯು ಗ್ರಾಮದ ವಿವಿಧೆಡೆ ಬೋನುಗಳನ್ನು ಇರಿಸಿದೆ. ಬೋನು ಇರಿಸಿದ ಸ್ಥಳಕ್ಕೆ ಹುಲಿಯನ್ನು ಸೆಳೆಯುವ ಉದ್ದೇಶದಿಂದ ಅರಣ್ಯ ಇಲಾಖೆ ಸಿಬ್ಬಂದಿ ಪ್ರಾಣಿಯೊಂದನ್ನು ಕಟ್ಟಿಹಾಕಿದ್ದರು. ಈ ಪ್ರಾಣಿಯನ್ನು ಹುಲಿ ಬೇಟೆಯಾಡಿ ಅರ್ಧ ತಿಂದು ತೆರಳಿದೆ. ಈ ಜಾಗ ದಲ್ಲಿ ಇದೀಗ ಬೋನು ಇರಿಸಿ ಹುಲಿಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಸಿದ್ಧತೆ ಕೈಗೊಂಡಿದೆ.
ವಿವಿಧ ಕಡೆಗಳಲ್ಲಿ ಮೂರು ಬೋನುಗಳನ್ನು ಇರಿಸಲಾಗಿದ್ದು, ಅರವಳಿಕೆ ತಜ್ಞರ ತಂಡವನ್ನು ಗ್ರಾಮದಲ್ಲಿ ನಿಯೋಜಿಸಲಾಗಿದೆ. ಕಾರ್ಯಾಚರಣೆಗೆ ಪಶುವೈದ್ಯರ ತಂಡ ಸೇರಿ 60 ಸಿಬ್ಬಂದಿ, 7 ಅಧಿಕಾರಿಗಳನ್ನು ನಿಯೋಜಿಸಲಾಗಿದೆ. 30 ನೈಟ್ ವಿಜನ್ ಕ್ಯಾಮರಾ, 8 ಜಿಎಸ್‌ಎಂ ಕ್ಯಾಮರಾ, 2 ಪಿಟಿಜೆಡ್ ಕ್ಯಾಮರಾ, 4 ಐಆರ್ ಸಿಸಿ ಕ್ಯಾಮರಾ ಅಳವಡಿಸಲಾಗಿದ್ದು, ಕ್ಯಾಮರಾದಲ್ಲಿ ಹುಲಿಯ ಚಲನವಲನ ಸೆರೆಯಾಗಿದೆ.