ಮೈಸೂರಿನಲ್ಲಿ ಸೆರೆಯಾದ ಹುಲಿ

A tiger captured in Mysore
Published on

ಮೈಸೂರು: ಮೈಸೂರು ನಗರದ ಹೊರವಲಯದ ಗ್ರಾಮಗಳಲ್ಲಿ ಆತಂಕ ಸೃಷ್ಟಿಸಿದ್ದ ಹುಲಿಯೊಂದನ್ನು ಅರಣ್ಯ ಇಲಾಖೆ ಗುರುವಾರ ಚಿಕ್ಕನಹಳ್ಳಿ ಮೀಸಲು ಅರಣ್ಯದಲ್ಲಿ ಸೆರೆ ಹಿಡಿದಿದ್ದು, ಜನರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ಮೈಸೂರು ಪ್ರಾದೇಶಿಕ ಅರಣ್ಯ ವಿಭಾಗದ ಮೈಸೂರು ವಲಯದ ಚಿಕ್ಕನಹಳ್ಳಿ ಮೀಸಲು ಅರಣ್ಯ ಮತ್ತು ಸುತ್ತಮುತ್ತಲಿನ ಗ್ರಾಮಗಳ ಜಮೀನಿನಲ್ಲಿ ಎರಡೂವರೆ ತಿಂಗಳ ಹಿಂದೆ 5 ವರ್ಷದ ಗಂಡು ಹುಲಿ ಕಾಣಿಸಿಕೊಂಡು ಜನರಲ್ಲಿ ಆತಂಕ ಮೂಡಿಸಿತ್ತು. ಹುಲಿಯನ್ನು ಸೆರೆ ಹಿಡಿಯಲು ಗ್ರಾಮಸ್ಥರು ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದರು. ಈ ಹಿನ್ನೆಲೆಯಲ್ಲಿ ಹುಲಿಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿ ಸತತ ಎರಡೂವರೆ ತಿಂಗಳು ಪ್ರಯತ್ನ ನಡೆಸಿ ಅಂತಿಮವಾಗಿ ಗುರುವಾರ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಮೈಸೂರು ವೃತ್ತ ಅರಣ್ಯ ಸಂರಕ್ಷಣಾಧಿಕಾರಿ ಮಾಲತಿ ಪ್ರಿಯಾ, ಡಿಸಿಎಫ್ ಡಾ.ಕೆ.ಎನ್. ಬಸವರಾಜ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎನ್. ಲಕ್ಷ್ಮೀಕಾಂತ, ವಲಯ ಅರಣ್ಯಾಧಿಕಾರಿ ಕೆ. ಸುರೇಂದ್ರ ನೇತೃತ್ವದಲ್ಲಿ ಅರಣ್ಯ ಸಿಬ್ಬಂದಿ, ಅರವಳಿಕೆ ವೈದ್ಯರ ತಂಡ, ವಿಶೇಷ ಹುಲಿ ಸಂರಕ್ಷಣಾ ಪಡೆ, ಆನೆ ಕಾರ್ಯಪಡೆ, ಚಿರತೆ ಕಾರ್ಯಪಡೆಯೊಂದಿಗೆ ಟ್ರಾಪ್ ಕ್ಯಾಮರಾಗಳು, ನೆಟ್‌ವರ್ಕ್ ಕ್ಯಾಮರಾಗಳು, ಐಆರ್ ಕ್ಯಾಮರಾಗಳು, ರಕ್ಷಣಾ ಸಲಕರಣೆಗಳು, ಬೋನುಗಳು ಬಳಸಿ 29-11-2023 ರಿಂದ ಹುಲಿ ಸೆರೆ ಕಾರ್ಯಾಚರಣೆ ಪ್ರಾರಂಭಿಸಲಾಯಿತು. ಚಿಕ್ಕನಹಳ್ಳಿ ಮೀಸಲು ಅರಣ್ಯದಲ್ಲಿ ನೂತನವಾಗಿ ವಿನ್ಯಾಸಗೊಳಿಸಿ ಅಳವಡಿಸಲಾಗಿದ್ದ ಬೃಹತ್ ‘ವಾಕ್‌ಥ್ರೂ’ ಬೋನಿನೊಳಗೆ ಹುಲಿ ಗುರುವಾರ ಬೆಳಗ್ಗಿನ ಜಾವ ಸೆರೆಯಾಗಿದೆ.

ಹುಲಿಯ ದೈಹಿಕ ಆರೋಗ್ಯವನ್ನು ಪಶು ವೈದ್ಯಾಧಿಕಾರಿಗಳು ಪರಿಶೀಲನೆ ನಡೆಸಿದ್ದು, ಹುಲಿ ಸದೃಢವಾಗಿದೆ. ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಮಾರ್ಗಸೂಚಿ ಪ್ರಕಾರ ಸೆರೆ ಹಿಡಿದ ಹುಲಿಯನ್ನು ಸೂಕ್ತ ಹುಲಿ ಸಂರಕ್ಷಿತ ಪ್ರದೇಶಕ್ಕೆ ಬಿಡುಗಡೆ ಮಾಡಲಾಗುವುದು ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಕೆ.ಎನ್. ಬಸವರಾಜ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net