

ಮೈಸೂರು: ದಸರಾ ಮಹೋತ್ಸವ ಅಂಗವಾಗಿ ಅಂಬಾವಿಲಾಸ ಅರಮನೆಯಲ್ಲಿ ರಾಜವಂಶಸ್ಥರ ಖಾಸಗಿ ದರ್ಬಾರ್‌ಗೆ ಸಾಕ್ಷಿಯಾಗಿದ್ದ ರತ್ನಖಚಿತ ಸಿಂಹಾಸನವನ್ನು ಗುರುವಾರ ವಿಸರ್ಜನೆ ಮಾಡಿ ಭದ್ರತಾ ಕೊಠಡಿಯಲ್ಲಿ ಇಡಲಾಯಿತು.
ಅರಮನೆಯ ನೆಲಮಾಳಿಗೆಯಲ್ಲಿರುವ ಭದ್ರತಾ ಕೊಠಡಿಯಲ್ಲಿ ಬಿಡಿಭಾಗಗಳಾಗಿ ವಿಂಗಡಿಸಿ ಇಡಲಾಗಿದ್ದ ಈ ಸಿಂಹಾಸನ ಹಾಗೂ ಬೆಳ್ಳಿ ಭದ್ರಾಸನವನ್ನು ದಸರಾ ಹಿನ್ನೆಲೆಯಲ್ಲಿ ಅ.9ರಂದು ವಿವಿಧ ಹೋಮ, ಹವನ ನಡೆಸಿದ ಬಳಿಕ ದರ್ಬಾರ್ ಹಾಲ್ ಹಾಗೂ ಕನ್ನಡಿ ತೊಟ್ಟಿಯಲ್ಲಿ ಜೋಡಣೆ ಮಾಡಲಾಗಿತ್ತು.
ಅ.15ರಿಂದ ಆರಂಭವಾಗಿದ್ದ ನವರಾತ್ರಿ ಸಂದರ್ಭದಲ್ಲಿ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಖಾಸಗಿ ದರ್ಬಾರ್ ನಡೆಸಿ ಸಿಂಹಾಸನಾರೂಢರಾಗಿ ಸಂಪ್ರದಾಯದಂತೆ ಧಾರ್ಮಿಕ ಕಾರ್ಯ ನೆರವೇರಿಸಿದ್ದರು.
ಅ.23ರಂದು ನಡೆದ ಆಯುಧಪೂಜೆ ದಿನ ಸಂಜೆ ಸಿಂಹ ವಿಸರ್ಜನೆ ಮಾಡುವ ಮೂಲಕ ಖಾಸಗಿ ದರ್ಬಾರ್ ಸಂಪನ್ನಗೊಂಡಿತ್ತು. ಅ.24ರಂದು ನಡೆದ ಜಂಬೂಸವಾರಿ ಮೆರವಣಿಗೆ ಬಳಿಕ ನವರಾತ್ರಿ ಉತ್ಸವ ಪೂರ್ಣಗೊಂಡಿತ್ತು. ಈ ಹಿನ್ನೆಲೆಯಲ್ಲಿ ಅಂದಿನಿಂದ ದರ್ಬಾರ್ ಹಾಗೂ ಕನ್ನಡಿ ತೊಟ್ಟಿಯಲ್ಲಿದ್ದ ಸಿಂಹಾಸನ ಹಾಗೂ ಭದ್ರಾಸನ ಇದೀಗ ಸ್ವಸ್ಥಾನವನ್ನು ಸೇರಿದೆ.
ಅಶ್ವಯುಜ ಮಾಸ, ಕೃಷ್ಣ ಪಕ್ಷ ದಶಮಿಯ ದಿನವಾದ ಬುಧವಾರ ಬೆಳಗ್ಗೆ 10.35ರಿಂದ 10.45ರೊಳಗೆ ಸಲ್ಲುವ ಶುಭ ಧನುರ್ ಲಗ್ನದಲ್ಲಿ ವಿವಿಧ ಪೂಜೆ ಸಲ್ಲಿಸಿದ ಬಳಿಕ ಸಿಂಹಾಸನ ಮತ್ತು ಭದ್ರಾಸನದ ಬಿಡಿಭಾಗವನ್ನು ವಿಂಗಡಿಸಲಾಯಿತು. ಸಿಂಹಾಸನವನ್ನು 8 ಬಿಡಿ ಭಾಗಗಳಾಗಿ, ಬೆಳ್ಳಿಯ ಭದ್ರಾಸನವನ್ನು 6 ಬಿಡಿಭಾಗಗಳಾಗಿ ವಿಭಜಿಸಲಾಯಿತು. ಬಳಿಕ ಇದನ್ನು ಶಸ್ತ್ರಸಜ್ಜಿತ ಸಿಬ್ಬಂದಿಯು ಭದ್ರತೆಯಲ್ಲಿ ಅರಮನೆಯಲ್ಲಿರುವ ಸ್ಟ್ರಾಂಗ್ ರೂಮ್‌ಗೆ ತೆಗೆದುಕೊಂಡು ಹೋಗಿ ಇರಿಸಲಾಯಿತು.
ಎಂದಿನಂತೆ ಅರಮನೆಯ ದರ್ಬಾರ್ ಹಾಲ್, ಕನ್ನಡಿತೊಟ್ಟಿ ಹಾಗೂ ಸ್ಟ್ರಾಂಗ್ ರೂಮ್ ಸೇರಿದಂತೆ ಇನ್ನಿತರೆಡೆಗಳಲ್ಲಿ ಎಲ್ಲ ಸಿಸಿ ಕ್ಯಾಮರಾಗಳಿಗೆ ಪರದೆ ಮುಚ್ಚಲಾಗಿತ್ತು. ಬಿಡಿಭಾಗ ಕೊಂಡೊಯ್ಯಲು ನಿಯೋಜಿಸಲಾಗಿದ್ದ ಸಿಬ್ಬಂದಿಯ ಮೊಬೈಲ್‌ಗಳನ್ನೂ ಲಾಕರ್‌ನಲ್ಲಿಡಲಾಗಿತ್ತು.
ಸಿಂಹಾಸನ ಜೋಡಣೆ ಮಾಡುವಾಗ ದರ್ಬಾರ್ ಹಾಲ್‌ನಲ್ಲಿದ್ದ ರಾಜವಂಶಸ್ಥರು ವಿಸರ್ಜನೆ ವೇಳೆ ಗೈರಾಗಿದ್ದರು. ರಾಜವಂಶಸ್ಥರ ಆಪ್ತ ಸಿಬ್ಬಂದಿ, ಅರಮನೆ ಭದ್ರತಾ ಮಂಡಳಿ ಸಮ್ಮುಖದಲ್ಲಿ ಈ ಪ್ರಕ್ರಿಯೆ ನಡೆಯಿತು.
ಸಿಂಹಾಸನದ ವಿಸರ್ಜನೆ ಸಂದರ್ಭದಲ್ಲಿ ಅರಮನೆಗೆ ಪ್ರವಾಸಿಗರ ಪ್ರವೇಶ ನಿರ್ಬಂಧಿಸಲಾಗಿತ್ತು. ಮಧ್ಯಾಹ್ನದ ನಂತರ ಅವಕಾಶ ಕಲ್ಪಿಸಿಕೊಡಲಾಯಿತು.