

ಸರಗೂರು : ತಾಲೂಕಿನ ಹಾದನೂರು ಗ್ರಾಮದಲ್ಲಿ ಎತ್ತಿನಗಾಡಿಗೆ ಎರಡು ಟ್ರಾೃಕ್ಟರ್ ಇಂಜಿನ್ ಕಟ್ಟಿ ಎಳೆದುಕೊಂಡು ನಾಗಾಲೋಟದಲ್ಲಿ ಓಡುತ್ತಿದ್ದ ದೃಶ್ಯ ಮೈನವಿರೇಳಿಸಿತು.
ದೀಪಾವಳಿ ಹಬ್ಬದ ಪ್ರಯುಕ್ತ ಜೋಡಿ ಎತ್ತಿನಗಾಡಿಗೆ ಟ್ರಾೃಕ್ಟರ್ ಇಂಜಿನ್ ಕಟ್ಟಿಕೊಂಡು ಎಳೆಯುವ 3ನೇ ವರ್ಷದ ಸ್ಪರ್ಧೆಯನ್ನು ಹಾದನೂರು ಜೈ ಭೀಮ್ ಅಂಬೇಡ್ಕರ್ ಹುಡುಗರ ಬಳಗದ ವತಿಯಿಂದ ಆಯೋಜಿಸಲಾಗಿತ್ತು. ಗ್ರಾಮದ ಯಜಮಾನರು ಹಾಗೂ ಮುಖಂಡರು ಸೇರಿಕೊಂಡು ಜೋಡಿ ಎತ್ತಿನಗಾಡಿಗೆ ಸ್ಪರ್ಧೆಗೆ ಚಾಲನೆ ನೀಡಿದರು.
ಮೈದಾನದಲ್ಲಿ ತಾ ಮುಂದು, ನಾ ಮುಂದು ಎಂದು ಜೋಡಿ ಎತ್ತಿನ ಗಾಡಿಗಳ ಮೇಲೆ ನಿಂತು ಹಗ್ಗವನ್ನು ಕೈಯಲ್ಲಿ ಹಿಡಿದು ಎತ್ತುಗಳಿಗೆ ಚಾವಟಿಯಲ್ಲಿ ಬಾರಿಸುತ್ತ ಗೆಲುವಿಗಾಗಿ ಹರಸಾಹಸ ಪಡುತ್ತಿದ್ದರೆ, ಮೈದಾನದ ಸೂತ್ತಲೂ ನೆರೆದ ಬೆಂಬಲಿಗರು ಹಾಗೂ ಪ್ರೇಕ್ಷಕರು ಶಿಳ್ಳೆ, ಚಪ್ಪಾಳೆ ತಟ್ಟಿ ಸ್ಪರ್ಧಿಗಳನ್ನು ಹುರಿದುಂಬಿಸಿದರು.
ಮಂಡ್ಯ ಜಿಲ್ಲೆಯ ಶಿರನಹಳ್ಳಿ ಗರುಡ ಸಿಪಾಯಿ ಜೋಡೆತ್ತು ಪ್ರಥಮ ಸ್ಥಾನ ಪಡೆದರೆ ಕೀಳಲನಪುರ ದಯಾನಂದಸ್ವಾಮಿ(ದ್ವಿ) ಹಾಗೂ ಮಂಡ್ಯ ಹುಲಿವಾಹನ ಜೋಡೆತ್ತು (ತೃ) ಸ್ಥಾನ ಪಡೆದವು. ಚಾಮರಾಜನಗರ, ಮೈಸೂರು ಹಾಗೂ ಮಂಡ್ಯ ಜಿಲ್ಲೆಗಳು ಹಾಗೂ ಎಚ್.ಡಿ. ಕೋಟೆ ಸರಗೂರು, ನಂಜನಗೂಡು ತಾಲೂಕಿನ ವಿವಿಧ ಗ್ರಾಮಗಳಿಂದ 18 ಜೊತೆ ಜೋಡೆತ್ತುಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ನೌಕಾಟ್ ಮಾದರಿಯಲ್ಲಿ ಸ್ಪರ್ಧೆ ನಡೆಸಲಾಯಿತು.
ಇದಕ್ಕೂ ಮೊದಲು ಹಾದನೂರು ಗ್ರಾಮದ ಪ್ರಮುಖ ಮುಖ್ಯ ಬೀದಿಯಲ್ಲಿ ಜೋಡೆತ್ತುಗಳನ್ನು ಮೆರವಣಿಗೆಯಲ್ಲಿ ಕರೆದೊಯ್ಯಲಾಯಿತು. ಕಲಾ ತಂಡಗಳು ಮೆರವಣಿಗೆಗೆ ಮೆರುಗು ನೀಡಿದವು.
ಗ್ರಾಪಂ ಉಪಾಧ್ಯಕ್ಷ ಪ್ರಕಾಶ್ ಮಾತನಾಡಿ, ಗ್ರಾಮೀಣ ಪ್ರದೇಶದ ರೋಮಾಂಚನಕಾರಿ ಕ್ರೀಡೆಯಲ್ಲಿ ಎತ್ತಿನಗಾಡಿ ಓಟವೂ ಒಂದಾಗಿದೆ. ಹಿಂದಿನ ಕಾಲದಲ್ಲಿ ಸದಾ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದ ರೈತರು ಮನರಂಜನೆ ಮತ್ತು ಸಾಹಸ ಪ್ರದರ್ಶನಕ್ಕಾಗಿ ಹುಟ್ಟುಹಾಕಿದ ಎತ್ತಿನಗಾಡಿ ಓಟ ಇವತ್ತಿಗೂ ಗ್ರಾಮೀಣ ಭಾಗದ ಪ್ರಮುಖ ಕ್ರೀಡೆಯಾಗಿ ಗಮನ ಸೆಳೆಯುತ್ತಿದೆ. ಮೊದಲಿಗೆ ಹೋಲಿಸಿದರೆ ಒಂದಷ್ಟು ಬದಲಾವಣೆಗಳೊಂದಿಗೆ ಇನ್ನಷ್ಟು ವೈಭವತೆ ಪಡೆದುಕೊಂಡಿರುವುದು ನಿಜಕ್ಕೂ ಖುಷಿಪಡುವ ಸಂಗತಿ ಎಂದರು.
ಯಜಮಾನರಾದ ರಾಜೇಶ್, ಪ್ರಕಾಶ್, ಗ್ರಾಪಂ ಸದಸ್ಯ ಶಿವರಾಜು, ಕೆಂಪಸಿದ್ದ, ಆಯೋಜಕರಾದ ನಾಗೇಶ್, ಮೂರ್ತಿ, ರಂಗಸ್ವಾಮಿ,ಮಧು, ಪ್ರಕಾಶ್ (ಕುಳ್ಳ), ರವಿಕುಮಾರ್, ಸುನೀಲ್, ಸೂರ್ಯ, ಆಕಾಶ್, ಸಂಜಯ್, ಅಜಿತ್, ಪಾಪ, ರಾಜಣ್ಣ, ಪುಟ್ಟಸ್ವಾಮಿ, ನಾಗರಾಜು, ಶಿಕ್ಷಕ ಸಿದ್ದಯ್ಯ, ಲೋಕೇಶ್, ರಮೇಶ್, ಸಣ್ಣಸ್ವಾಮಿ, ಶಿವಮೂರ್ತಿ, ಪ್ರಸನ್ನ ಕುಮಾರ್, ನಾಗೇಂದ್ರ, ವೃಷಬೇಂದ್ರ, ಅಂಚೆ ಕಚೇರಿ ಧ್ರುವ ಕುಮಾರ್, ಚಿಕ್ಕ ಪುಟ್ಟಯ್ಯ, ನಾರಾಯಣಸ್ವಾಮಿ (ಶನೈಶ್ಚರ ಗುಡಪ್ಪ) ಸೇರಿದಂತೆ ಮತ್ತಿತರರು ಇದ್ದರು.