ಮೈಸೂರಿನಲ್ಲಿ ಮೂರು ದಿನಗಳ ಗಡ್ಡೆ- ಗೆಣಸು ಮೇಳ

36
Published on

ಮೈಸೂರು: ನಜರ್‌ಬಾದ್‌ನಲ್ಲಿರುವ ನೆಕ್ಸಸ್ ಸೆಂಟರ್ ಸಿಟಿನಲ್ಲಿ ಆಯೋಜಿಸಿರುವ ಮೂರು ದಿನಗಳ ಗಡ್ಡೆ- ಗೆಣಸು ಮೇಳಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು.
ನಗರದ ದಿಲ್ಲಿ ಪಬ್ಲಿಕ್ ಸ್ಕೂಲ್‌ನ ಪ್ರಾಂಶುಪಾಲರಾದ ಮಂಜು ಶರ್ಮಾ ಅವರು ಮೇಳಕ್ಕೆ ಚಾಲನೆ ನೀಡಿ, ಹವಾಮಾನ ವೈಪರೀತ್ಯವನ್ನು ಎದುರಿಸಿ, ನೈಸರ್ಗಿಕವಾಗಿ ಬೆಳೆಯುವ ಗಡ್ಡೆ- ಗೆಣಸುಗಳನ್ನು ನಮ್ಮ ನಿತ್ಯದ ಆಹಾರವಾಗಿ ಬಳಸಬೇಕು. ನಾರಿನಿಂದ ಸಮೃದ್ಧವಾಗಿರುವ ಗಡ್ಡೆ- ಗೆಣಸುಗಳು ನಮ್ಮ ಆರೋಗ್ಯವನ್ನು ಕಾಪಾಡುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದು ಹೇಳಿದರು.
ನೆಕ್ಸಸ್ ಸೆಂಟರ್ ಸಿಟಿ ಕಾರ್ಯಾಚರಣೆ ಮುಖ್ಯಸ್ಥ ಎಂ.ಎಸ್.ಮೋಹನ್‌ಕುಮಾರ್ ಮಾತನಾಡಿ, ಗಡ್ಡೆ- ಗೆಣಸುಗಳ ವೈವಿಧ್ಯ ಅಪಾರವಾಗಿದೆ. ನಗರದ ಗ್ರಾಹಕರಿಗೆ ಗಡ್ಡೆ- ಗೆಣಸುಗಳ ಮಹತ್ವದ ಅರಿವು ಮಾಡಿಕೊಡಲು ಮೇಳವನ್ನು ಆಯೋಜಿಸಲಾಗಿದೆ. ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಮೇಳದ ಆಯೋಜಕ, ಸಹಜ ಸಮೃದ್ಧದ ನಿರ್ದೇಶಕ ಜಿ.ಕೃಷ್ಣ ಪ್ರಸಾದ್ ಮಾತನಾಡಿ, ಗಡ್ಡೆ- ಗೆಣಸಿನಿಂದ ಅಡುಗೆ ಮಾಡುವ ಪ್ರಾತ್ಯಕ್ಷಿಕೆ ಏರ್ಪಡಿಸಲಾಗಿದೆ. ಗಡ್ಡೆ- ಗೆಣಸುಗಳನ್ನು ಉಳಿದ ತರಕಾರಿಗಳಂತೆ ನಿತ್ಯದ ಆಹಾರದಲ್ಲಿ ಬಳಸಬಹುದಾಗಿದೆ ಎಂದರು.
ಡೆಲ್ಲಿ ಪಬ್ಲಿಕ್ ಸ್ಕೂಲ್‌ನ ಅಮಿರಾ ಸುಭೋಯಿ, ನಂದಿತಾ ಫಿಲಿಪ್, ನೆಕ್ಸಸ್ ಸೆಂಟರ್ ಸಿಟಿಯ ಸಿ.ಎಸ್.ಮನು, ಮಧುಸೂದನ್, ಸಹಜ ಸಮೃದ್ಧದ ಕೆ.ಎಸ್.ಮಂಜು, ಕೋಮಲ್ ಕುಮಾರ್ ಇದ್ದರು.

ಪ್ರದರ್ಶನ
ಮೂರು ದಿನಗಳ ಕಾಲ ನಡೆಯುವ ಗಡ್ಡೆ- ಗೆಣಸು ಮೇಳದಲ್ಲಿ ಪರ್ಪಲ್ ಯಾಮ್, ಸಿಹಿ ಗೆಣಸು, ಕೆಸು, ಸುವರ್ಣ ಗಡ್ಡೆ, ಬಳ್ಳಿ ಆಲೂಗಡ್ಡೆ, ಕೂವೆ ಗಡ್ಡೆ , ಬಣ್ಣದ ಸಿಹಿ ಗೆಣಸು, ಹಸಿರು ಮತ್ತು ಕಪ್ಪು ಅರಿಶಿಣ, ಮಾವಿನ ಶುಂಠಿ ಮೊದಲಾದ ಗಡ್ಡೆ ಗೆಣಸು ಪ್ರದರ್ಶನ ಮತ್ತು ಮಾರಾಟ ಇರಲಿದೆ. ಗಡ್ಡೆ ಗೆಣಸಿನ ಮೌಲ್ಯವರ್ಧಿತ ಪದಾರ್ಥ, ದೇಸಿ ಅಕ್ಕಿ, ಸಿರಿಧಾನ್ಯಗಳು, ಜವಾರಿ ಬೀಜಗಳು, ಗಾಣದ ಎಣ್ಣೆ , ಮತ್ತು ಸಾವಯವ ಪದಾರ್ಥಗಳ ಪ್ರದರ್ಶನ ಇರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net