ಮಂಗ್ಳೂರಲ್ಲಿ ಘೋರ ಕೃತ್ಯ: ಮೂರು ಮಕ್ಕಳನ್ನು ಬಾವಿಗೆ ನೂಕಿ ಕೊಂದ ತಂದೆ! ಪತ್ನಿಯನ್ನೂ ತಳ್ಳಿ ಹೈಡ್ರಾಮ...

well
Published on

ಮಂಗಳೂರು: ತಂದೆಯೇ ತನ್ನ ಮೂವರು ಮಕ್ಕಳು ಬಾವಿಗೆ ನೂಕಿ ಕೊಂದ ಧಾರುಣ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ತಾಲೂಕಿನ ಪದ್ಮನೂರು ಬಳಿ ಗುರುವಾರ ಸಂಜೆ ಸಂಭವಿಸಿದೆ.

ರಶ್ಮಿತಾ(14), ಉದಯ್(11) ಮತ್ತು ದಕ್ಷಿತ್(4) ಮೃತ ಮಕ್ಕಳು. ತಂದೆ ವಿಜೇಶ್ ಶೆಟ್ಟಿಗಾರ್ ಆರೋಪಿ. ಬೆಳಗ್ಗೆ ಶಾಲೆಗೆ ಹೋಗಿದ್ದ ಮಕ್ಕಳು ಮನೆಗೆ ಬರುತ್ತಿದ್ದಂತೆ, ಅವರನ್ನು ಕರೆದೊಯ್ದು ಬಾವಿಗೆ ನೂಕಿ ಕೊಂದಿದ್ದಾನೆ. ಬಳಿಕ ಮನೆಗೆ ಬಂದಿದ್ದಾನೆ. ಮಕ್ಕಳು ಎಲ್ಲಿ? ಎಂದು ಪತ್ನಿ ಲಕ್ಷ್ಮೀ ಕೇಳಿದಾಗ ಎಲ್ಲೋ ಅವಿತುಕೊಂಡು ಆಟವಾಡುತ್ತಿರಬೇಕು ಎಂದು ಸುಳ್ಳು ಹೇಳಿದ್ದಾನೆ.

ಅನುಮಾನಗೊಂಡ ಪತ್ನಿ, ಸಮೀಪದ ಬಾವಿ ಬಳಿಗೆ ಬಂದು ನೋಡುತ್ತಿದ್ದಂತೆ ಆಕೆಯನ್ನೂ ಬಾವಿಗೆ ತಳ್ಳಲು ಯತ್ನಿಸಿದ್ದಾನೆ. ನೀನು ಸಾಯಬೇಕು, ನಾನು ಸಾಯುವೆ ಎನ್ನುತ್ತಾ ಆಕೆಯನ್ನೂ ನೂಕಿ, ಬಾವಿಗೆ ತಾನೂ ಹಾರಿದ್ದಾನೆ. ಅಷ್ಟರಲ್ಲಿ ಸ್ಥಳಕ್ಕೆ ಬಂದ ಸ್ಥಳೀಯರು ಗಂಡ-ಹೆಂಡತಿ ಇಬ್ಬರನ್ನೂ ರಕ್ಷಿಸಿದ್ದಾರೆ. ಮಕ್ಕಳು ಮೃತಪಟ್ಟಿದ್ದಾರೆ. ಮಂಗಳೂರು ಉತ್ತರ ಎಸಿಪಿ ಮಹೇಶ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮುಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ನು ವಿಜೇಶ್ ಶೆಟ್ಟಿಗಾರ್ ಇಡೀ ಕುಟುಂಬವನ್ನೇ ಕೊಂದು ಸಾಯಲು ಯತ್ನಿಸಿದ್ದು ಏಕೆ? ಎಂಬುದು ಇನ್ನೂ ಗೊತ್ತಾಗಿಲ್ಲ. ಅದ್ಹೇನೆ ಇರಲಿ, ಆಟವಾಡುತ್ತಾ ಓದಿಕೊಂಡಿರಬೇಕಿದ್ದ ಪುಟ್ಟ ಮಕ್ಕಳು ತಂದೆಯಿಂದಲೇ ದುರಂತ ಅಂತ್ಯಕಂಡದ್ದು ಮಾತ್ರ ವಿಪರ್ಯಾಸ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net