

ಕಾರ್ಕಳ: ಕಾರ್ಕಳದ ಶಿರ್ಲಾಲು ಗ್ರಾಮದ ಮುಂಡ್ಲಿ ಎಂಬಲ್ಲಿ ನಡೆಯುತ್ತಿದ್ದ ಯಕ್ಷಗಾನ ಪ್ರದರ್ಶನದ ನಡುವೆ ಕಾಂಗ್ರೆಸ್ ನಾಯಕನ ಆದೇಶದ ಮೇರೆಗೆ ಮಧ್ಯಪ್ರವೇಶಿಸಿದ ಪೊಲೀಸರು ಏಕಾಏಕಿ ಪ್ರದರ್ಶನ ರದ್ದುಪಡಿಸಲು ಸೂಚಿಸಿದಾಗ ನೆರೆದಿದ್ದ ಯಕ್ಷಗಾನ ಅಭಿಮಾನಿಗಳ ವಿರೋಧದಿಂದ ವಾಪಸ್ ಆದ ಪೊಲೀಸರು ಸದರಿ ಯಕ್ಷಗಾನ ಆಯೋಜಕರ ಹಾಗೂ ಅಭಿಮಾನಿಗಳ ಮೇಲೆ ಮೊಕದ್ದಮೆ ದಾಖಲಿಸಿ, ಕಲೆಗೆ ಅವಮಾನ ಮಾಡಿರುವುದು ಖಂಡನೀಯ ಎಂದು ಕಾರ್ಕಳ ಬಿಜೆಪಿ ಕ್ಷೇತ್ರಾಧ್ಯಕ್ಷ ನವೀನ್ ನಾಯಕ್ ಹೇಳಿದರು.
ಯಕ್ಷಗಾನ ಕಲೆ ಕಾನೂನಿನ ಯಾವುದೇ ಕಟ್ಟುಪಾಡುಗಳಿಲ್ಲದೇ ನಡೆಯುವ ಕಲೆ. ಆದರೆ ಕಾಂಗ್ರೆಸ್ಸಿಗರ ಈ ವರ್ತನೆಯಿಂದ ಇನ್ನು ಮುಂದೆ ಯಕ್ಷಗಾನ ಕಲೆ ಪ್ರದರ್ಶನಕ್ಕೂ ಸಂಚಕಾರ ಬಂದರೆ ಅಚ್ಚರಿಯಿಲ್ಲ. ಯಕ್ಷಗಾನ ಪ್ರದರ್ಶನಕ್ಕೆ ಅಡ್ಡಿಪಡಿಸಿದವರು ಇನ್ನು ಮುಂದೆ ಕೋಲ, ನೇಮ, ಜಾತ್ರೆ ಹಾಗೂ ದೇವರ ಉತ್ಸವಗಳನ್ನೂ ಕೂಡ ನಿಷೇಧಿಸುವ ದಿನ ದೂರವಿಲ್ಲ ಎಂದು ಆರೋಪಿಸಿದರು.