ಮೈಸೂರಿನ ರೈಲ್ವೆ ನಿಲ್ದಾಣಕ್ಕೆ ಮೂರನೇ ಪ್ರವೇಶದ್ವಾರ ನಿರ್ಮಿಸಲು ಚಿಂತನೆ

mysore-railway-station
Published on

ಅವಿನಾಶ್ ಜೈನಹಳ್ಳಿ ಮೈಸೂರು

ಮೈಸೂರು ರೈಲ್ವೆ ನಿಲ್ದಾಣವನ್ನು ಮತ್ತಷ್ಟು ಜನಸ್ನೇಹಿ ಮಾಡುವ ಉದ್ದೇಶದಿಂದ ರೈಲ್ವೆ ಇಲಾಖೆಯು 200 ಕೋಟಿ ರೂ. ವೆಚ್ಚದಲ್ಲಿ ಮೂರನೇ ಪ್ರವೇಶದ್ವಾರ ನಿರ್ಮಿಸಲು ಉದ್ದೇಶಿಸಿದೆ.

ರಾಜಧಾನಿ ಬೆಂಗಳೂರು ನಂತರ ಮೈಸೂರು ಅತಿ ವೇಗವಾಗಿ ಬೆಳೆಯುತ್ತಿದೆ. ಮೈಸೂರು ರೈಲು ನಿಲ್ದಾಣದಿಂದ ಅಂದಾಜು 50 ಸಾವಿರಕ್ಕೂ ಹೆಚ್ಚು ಜನರು ನಿತ್ಯ ಪ್ರಯಾಣಿಸುತ್ತಾರೆ. ಇದರಲ್ಲಿ ಉದ್ಯೋಗಸ್ಥರು, ವಿದ್ಯಾರ್ಥಿಗಳು, ಮಹಿಳೆಯರ ಸಂಖ್ಯೆಯೇ ಹೆಚ್ಚು. ಮೈಸೂರು-ಬೆಂಗಳೂರು ರೈಲಿಗಂತೂ ಹೆಚ್ಚಿನ ಬೇಡಿಕೆ ಇದೆ. ಇದನ್ನು ಗಮನಿಸಿ ನೈಋತ್ಯ ರೈಲ್ವೆ ಮೈಸೂರು ವಿಭಾಗವು ಟಿಕೆಟ್ ಕೌಂಟರ್‌ನಲ್ಲಿ ಸಾಲು ತಪ್ಪಿಸಲು ಹಾಗೂ ವ್ಯವಸ್ಥಿತ ಪಾರ್ಕಿಂಗ್ ವ್ಯವಸ್ಥೆ ನೀಡುವ ಉದ್ದೇಶದಿಂದ ಮೂರನೇ ಪ್ರವೇಶ ದ್ವಾರ ತೆರೆಯಲು ನಿರ್ಧರಿಸಿದೆ.

ಸಿದ್ಧವಾಗುತ್ತಿದೆ ನೀಲಿನಕ್ಷೆ:

ಪ್ರಸ್ತುತ ಮೈಸೂರು ರೈಲ್ವೆ ನಿಲ್ದಾಣಕ್ಕೆ ಎರಡು ಪ್ರವೇಶ ದ್ವಾರ ಇದೆ. ಒಂದು ಮುಖ್ಯ ರೈಲ್ವೆ ನಿಲ್ದಾಣ ಪ್ರವೇಶ ದ್ವಾರ, ಮತ್ತೊಂದು ರೈಲ್ವೆ ಮ್ಯೂಸಿಯಂ ಬಳಿ ಇದೆ. ಒಂಟಿಕೊಪ್ಪಲು, ವಿಜಯನಗರ ಸೇರಿದಂತೆ ಇತರ ಬಡಾವಣೆ ಜನರು ಸಿಎಫ್‌ಆರ್‌ಐ ಪ್ರವೇಶ ದ್ವಾರವನ್ನು ಬಳಕೆ ಮಾಡಿದರೆ, ನಗರ ಭಾಗದ ನಾಗರಿಕರು ಮುಖ್ಯ ರೈಲ್ವೆ ನಿಲ್ದಾಣ ಪ್ರವೇಶ ದ್ವಾರದಿಂದ ಸಂಚರಿಸುತ್ತಾರೆ. ಇದೀಗ ಹೊಸ ಪ್ರವೇಶ ದ್ವಾರ ಬನ್ನಿಮಂಟಪದಿಂದ ಬರುವ ಜನರಿಗೆ ಅನುಕೂಲವಾಗಲಿದೆ. ಸುಮಾರು 1.5 ಕಿಮೀ ಉಳಿತಾಯವಾಗುತ್ತದೆ. ಅಲ್ಲದೆ, ಅಶೋಕಪುರಂ ರೈಲ್ವೆ ನಿಲ್ದಾಣ ಬೇರೆ ಆಗಿರುವುದರಿಂದ ಜೆ.ಪಿ.ನಗರ, ಶ್ರೀರಾಂಪುರ ಸೇರಿದಂತೆ ಇತರರು ಅಲ್ಲಿಂದಲೇ ಪ್ರಯಾಣಿಸುತ್ತಾರೆ. ಹೀಗಾಗಿ ಹೊಸ ಪ್ರವೇಶ ದ್ವಾರವೂ ಟ್ರಾಫಿಕ್ ತಡೆಗಟ್ಟಲು ಸಹ ಸಹಕಾರಿಯಾಗಲಿದೆ.

ಎಲ್ಲಿ ದ್ವಾರ ನಿರ್ಮಾಣ?:

ಪ್ರಸ್ತುತ ವಾಣಿ ವಿಲಾಸ ನೀರು ಸರಬರಾಜು ಕಚೇರಿ ಬಳಿ ರೈಲ್ವೆ ಇಲಾಖೆಗೆ ಸೇರಿದ ಜಾಗವಿದೆ. ಅಲ್ಲಿಯೇ ಹೊಸ ಪ್ರವೇಶ ದ್ವಾರ ತಲೆ ಎತ್ತಲಿದೆ. ಇಲ್ಲಿಂದಲೇ ಎರಡನೇ ಪ್ರವೇಶ ದ್ವಾರಕ್ಕೂ ನೇರ ಎಂಟ್ರಿ ಕೊಡಬಹುದಾ ಎಂಬ ಚರ್ಚೆ ನಡೆಯುತ್ತಿದೆ. ಇದರಿಂದ ಪ್ಲಾಟ್ ಫಾರ್ಮ್‌ಗಳ ಸಂಖ್ಯೆಯೂ ಹೆಚ್ಚಾಗಲಿದೆ. ಜತೆಗೆ ಹೆಚ್ಚುವರಿ ರೈಲನ್ನೂ ಓಡಿಸಬಹುದು. ಇಲ್ಲಿಂದಲೇ ಟಿಕೆಟ್ ಪಡೆದು, ವಾಹನ ನಿಲ್ಲಿಸಿ ಪ್ಲಾಟ್ ಫಾರ್ಮ್‌ಗೆ ತೆರಳಬಹುದು. ಇದರಿಂದ ಪ್ರಯಾಣಿಕರ ಸಮಯವೂ ಉಳಿಯುತ್ತದೆ. ಮೈಸೂರು ಪಾರಂಪರಿಕತೆಗೆ ಧಕ್ಕೆಯಾಗದಂತೆ ಮೂರನೇ ಪ್ರವೇಶ ದ್ವಾರವನ್ನು ನಿರ್ಮಿಸಲು ರೈಲ್ವೆ ಇಲಾಖೆ ತೀರ್ಮಾನಿಸಿದೆ.

ಏನೆಲ್ಲಾ ಪ್ರಯೋಜನ?:

ಇದರಿಂದ ಟಿಕೆಟ್‌ಗೆ ಸಾಲಿನಲ್ಲಿ ನಿಲ್ಲುವುದು ತಪ್ಪುತ್ತದೆ. ಟ್ರಾಫಿಕ್ ಜಾಮ್‌ಗೆ ತಡೆ ಬೀಳಲಿದೆ. ಸುಗಮ ಸಂಚಾರಕ್ಕೆ ಅನುಕೂಲವಾಗುತ್ತದೆ. ಬನ್ನಿಮಂಟಪದಿಂದ ಬರುವವರಿಗೆ ಬಳಸಿ ಬರುವುದು ನಿಲ್ಲುತ್ತದೆ. ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆಯೂ ಸಿಗುತ್ತದೆ. ಹೆಚ್ಚುವರಿ ರೈಲುಗಳನ್ನು ಓಡಿಸಬಹುದು.

ವಾಣಿ ವಿಲಾಸ ನೀರು ಸರಬರಾಜು ಕಚೇರಿ ಸಮೀಪ ಮೂರನೇ ಪ್ರವೇಶ ದ್ವಾರ ಬರಲಿದೆ. 200 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತದೆ. ನೀಲಿನಕ್ಷೆ ಅಂತಿಮಗೊಂಡ ತಕ್ಷಣ ಡಿಪಿಆರ್ ಕೆಲಸ ಶುರುವಾಗುತ್ತದೆ. ಇದರ ಜತೆಗೆ ರೈಲ್ವೆ ನಿಲ್ದಾಣವನ್ನು ಮೇಲ್ದರ್ಜೆಗೇರಿಸುವ ಕೆಲಸವೂ ನಡೆಯುತ್ತಿದೆ.ಪ್ರತಾಪಸಿಂಹ, ಸಂಸದ. ಕೇಂದ್ರ ರೈಲ್ವೆ ಇಲಾಖೆಗೆ ವರದಿ ಸಲ್ಲಿಸಿದ್ದೇವೆ. ಅಲ್ಲದೆ, ಕಂಪನಿಯೊಂದು ನೀಲನಕ್ಷೆ ಸಿದ್ಧಪಡಿಸುತ್ತಿದೆ. ಅದು ಇನ್ನೂ ಅಂತಿಮಗೊಂಡಿಲ್ಲ. ಮೂರನೇ ಪ್ರವೇಶ ದ್ವಾರವನ್ನು ನೇರವಾಗಿ ಎರಡನೇ ಪ್ರವೇಶ ದ್ವಾರಕ್ಕೆ ಜೋಡಿಸಬಹುದು ಎಂಬ ಚಿಂತನೆಯೂ ಇದೆ. ಇದರಿಂದ ಜನರಿಗಂತೂ ಅನುಕೂಲವಾಗಲಿದೆ.ಶಿಲ್ಪಿ ಅಗರ್‌ವಾಲ್, ನೈರುತ್ಯ ರೈಲ್ವೆ ಮೈಸೂರು ವಿಭಾಗೀಯ ವ್ಯವಸ್ಥಾಪಕಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net