

ಬಾಗಲಕೋಟೆ: ಎಲ್ಲ ಸಂಕಷ್ಟಗಳನ್ನು ಮೆಟ್ಟಿನಿಂತು ಅನ್ನದಾತ ತನ್ನ ನೆಚ್ಚಿನ ಕೆಂಪು ಸುಂದರಿಯನ್ನು ಬೆಳೆಸಿದ್ದಾನೆ. ಆದರೆ, ಬೆಳೆದು ನಿಂತಿರುವ ಕೆಂಪು ಸುಂದರಿಗೆ ಒಳ್ಳೆಯ ಬೇಡಿಕೆ ಬಂದಿದ್ದೆ ತಡ ಅದರ ಮೇಲೆ ಕಳ್ಳಕಾಕರ ವಕ್ರದೃಷ್ಟಿ ಬಿದ್ದಿದೆ.
ಹೌದು, ಭೀಕರ ಬರ, ಮಳೆ ಇಲ್ಲ, ಬೆಳೆ ಬರುತ್ತಿಲ್ಲ ಎನ್ನುವ ಸಂಕಷ್ಟದ ನಡುವೆಯೂ ಬಾಗಲಕೋಟೆ ಜಿಲ್ಲೆಯಲ್ಲಿ ಅನೇಕ ರೈತರು ಸಾವಿರಾರು ರೂ. ಖರ್ಚು ಮಾಡಿ ಟ್ಯಾಂಕರ್ ಮೂಲಕ ನೀರುಣಿಸಿ ಮೆಣಸಿನಕಾಯಿ ಬೆಳೆದಿದ್ದಾರೆ.
ಅದಕ್ಕೆ ತಕ್ಕಂತೆ ಮಾರುಕಟ್ಟೆಯಲ್ಲಿ ಭರ್ಜರಿ ಬೆಲೆಯೂ ಸಿಗುತ್ತಿದೆ. ಅಧಿಕ ಬೆಲೆ ಸಿಗುತ್ತಿರುವುದು ಇದೀಗ ರೈತರಿಗೆ ಸಂಕಷ್ಟ ಎದುರಾಗಲು ಕಾರಣವಾಗಿದೆ.
ದುಷ್ಟರು ರಾತ್ರೋ ರಾತ್ರಿ ಹೊಲಗಳಿಗೆ ನುಗ್ಗಿ ಮೆಣಸಿನಕಾಯಿ ಕಳವು ಮಾಡಿಕೊಂಡು ಹೋಗುತ್ತಿದ್ದಾರೆ.
ಕಳ್ಳತನ ದಿನೇ ದಿನೆ ಹೆಚ್ಚುತ್ತಿರುವುದು ರೈತರಿಗೆ ನಿದ್ದೆಗೆಡಿಸಿದ್ದು, ರಾತ್ರಿ ಜಾಗರಣೆ ಮಾಡುವಂತೆ ಮಾಡಿದೆ.
ಪ್ರಸಕ್ತ ವರ್ಷ ಜಿಲ್ಲೆಯಲ್ಲಿ 22 ಹೆಕ್ಟೇರ್ ಪ್ರದೇಶದಲ್ಲಿ ಮೆಣಸಿನಕಾಯಿ ಬಿತ್ತನೆ ಮಾಡಲಾಗಿದೆ. ಇದೀಗ ಬೆಳೆ ಕಟಾವಿಗೆ ಬಂದಿದೆ. ಉತ್ಪನ್ನ ಸಂರಕ್ಷಣೆ ಮಾಡಿಕೊಳ್ಳಲು ಅನೇಕ ಬೆಳೆಗಾರರು ರಾತ್ರಿ ಹೊಲದಲ್ಲಿ ಮಲಗುತ್ತಿದ್ದಾರೆ.
ಆದರೆ, ಈ ಬದಿಯಲ್ಲಿ ಅವರು ಇದ್ದಾಗ ಮತ್ತೊಂದು ಬದಿಯಲ್ಲಿ ಕಳ್ಳರು ಪಟಪಟನೆ ಕಾಯಿ ಬಿಡಿಸಿಕೊಂಡು ಹೋಗುತ್ತಿದ್ದಾರೆ. ಇದರಿಂದ ರೈತರಿಗೆ ದಿಕ್ಕು ತೋಚದಂತಾಗಿದೆ. ಬಾಗಲಕೋಟೆ, ಹುನಗುಂದ ತಾಲೂಕಿನಲ್ಲಿ ರೈತರು ಅತಿ ಹೆಚ್ಚು ಮೆಣಸಿನಕಾಯಿ ಬೆಳೆಯುತ್ತಿದ್ದಾರೆ. ಜನವರಿ ತಿಂಗಳಲ್ಲಿ ಕೊಯ್ಲು ಮಾಡಲಿದ್ದು, ಅಲ್ಲಿವರೆಗೆ ಕಳ್ಳರಿಂದ ಬೆಳೆ ರಕ್ಷಣೆ ಹೇಗೆ ಎನ್ನುವುದೇ ಅವರಿಗೆ ದೊಡ್ಡ ಸವಾಲ್ ಆಗಿದೆ.
ಬೆಳೆದಿರುವ ಮೆಣಸಿನಕಾಯಿಯನ್ನು ರಾತ್ರೋ ರಾತ್ರಿ ಕಳ್ಳರು ದೋಚಿಕೊಂಡು ಹೋಗುತ್ತಾರೆ ಎನ್ನುವ ಭಯದಲ್ಲೆ ಬಾಗಲಕೋಟೆ ತಾಲೂಕಿನ ಮನ್ನಿಕಟ್ಟಿ ಭಾಗದಲ್ಲಿ ಕೆಲ ರೈತರು ಅವಧಿ ಪೂರ್ವದಲ್ಲೆ ಮೆಣಸಿನಕಾಯಿ ಕೋಯ್ಲ ಮಾಡಿ, ಮೆಣಸಿನಕಾಯಿ ಒಣಗಿಸಲು ಹಾಕುತ್ತಿರುವುದು.