

ಹುಬ್ಬಳ್ಳಿ: ಇಲ್ಲಿನ ನೃಪತುಂಗ ಬೆಟ್ಟದಲ್ಲಿರುವ ಶ್ರೀಗಂಧ ಮರಗಳ ಮೇಲೆ ಕಳ್ಳರ ಕಣ್ಣು ಹಾಕಿದ್ದು, ಸಣ್ಣ ಹಿಡಿಯಿದ್ದರೂ (ಈಲ್ಡ್) ಕೊಡಲಿ ಅಥವಾ ಗರಗಸದ ಪೆಟ್ಟು ಬೀಳುತ್ತಿದೆ.
ಭಾನುವಾರ ರಾತ್ರಿ ಶ್ರೀಗಂಧ ಮರಗಳ್ಳರ ಕೈಚಳಕಕ್ಕೆ ಮರವೊಂದು ನಾಶವಾಗಿದೆ. ಕಳೆದ 6 ತಿಂಗಳಿಂದ ಇಂಥ ಪ್ರಕರಗಳು ನಡೆದಿರಲಿಲ್ಲ. ಮೊದಲು ನಡೆಯುತ್ತಿದ್ದರೂ ಅರಣ್ಯ ಇಲಾಖೆಯಿಂದ ಸಂರಕ್ಷಣೆ ಸಿಗುತ್ತಿತ್ತು. ಈಗ ಬಹಳಷ್ಟು ಶ್ರೀಗಂಧ ಮರಗಳಿದ್ದರೂ ಅರಣ್ಯ ಇಲಾಖೆಯಿಂದ ಕಣ್ಗಾವಲು ಕೊರತೆ ಇದೆ ಎನ್ನುತ್ತಾರೆ ಪರಿಸರ ಪ್ರೇಮಿಗಳು.
ಮಾರ್ಕ್ ಬೀಳುತ್ತಿದೆ: ಶ್ರೀಗಂಧದ ಮರಗಳನ್ನು ಕಡಿಯುವ ಮೊದಲು ಕಳ್ಳರು ಕೆಲ ಗಿಡಗಳ ಮೇಲೆ ಗುರುತು (ಮಾರ್ಕ್) ಮಾಡುತ್ತಿದ್ದಾರೆ. ಕೆಲ ದಿನಗಳು ಬಿಟ್ಟು ಯಾರೂ ಇಲ್ಲದ ವೇಳೆ ಒಳ ನುಗ್ಗಿ, ಮರ ಕಡಿದುಕೊಂಡು ಹೋಗುತ್ತಿದ್ದಾರೆ. ಇತ್ತೀಚೆಗೆ ಸಣ್ಣ ಮರಗಳನ್ನು ಸಹ ಕಳ್ಳರು ಬಿಡುತ್ತಿಲ್ಲ ಎಂಬ ಆರೋಪವಿದೆ.
20 ವರ್ಷ ಬೇಕು: ಶ್ರೀಗಂಧ ಮರ ಬಲಿತಗೊಳ್ಳಲು ಕನಿಷ್ಠ 20 ವರ್ಷ ಬೇಕು. ಶೇ. 45ರಷ್ಟು ಶ್ರೀಗಂಧದ ತಿರುಳು ಇಂಥ ಮರಗಳಲ್ಲಿ ಇರುತ್ತದೆ. ದೊಡ್ಡ ಮರಗಳನ್ನಾಗಿ ಬೆಳೆಸಲು ಕೆಲ ಪರಿಸರ ಪ್ರೇಮಿಗಳು ಹಗಲಿರಳು ಎನ್ನದೆ ಶ್ರಮಿಸುತ್ತಿದ್ದಾರೆ. ಅರಣ್ಯ ಇಲಾಖೆಯವರೂ ಇರುತ್ತಾರೆ. ಆದರೆ, ರಾತ್ರಿ ಕಾವಲು ಇರದೇ ಇರುವುದರಿಂದ ಇಂಥ ಅವಘಡಗಳು ನಡೆಯುತ್ತಿರುತ್ತವೆ ಎನ್ನುತ್ತಾರೆ ಗ್ರೀನ್ ಕರ್ನಾಟಕ ಅಸೋಸಿಯೇಷನ್ ಅಧ್ಯಕ್ಷ ಚೆನ್ನು ಹೊಸಮನಿ.
"ಶ್ರೀಗಂಧದ ತಿರುಳು ಇದೆ ಎಂದು ಕಳ್ಳರು ಸಣ್ಣ ಮರಗಳನ್ನೂ ಕಡಿಯುತ್ತಿದ್ದಾರೆ. ಶ್ರೀಗಂಧದ ಗಿಡ ನೃಪತುಂಗ ಬೆಟ್ಟದಲ್ಲಿರುವುದು ಗಮನಕ್ಕೆ ಬಂದಿದೆ. ಇದನ್ನು ಪರಿಶೀಲಿಸಿ ಕ್ರಮ ಜರುಗಿಸಲಾಗುವುದು".
-ಶ್ರೀಧರ ತೆಗ್ಗಿನಮನಿ, ಹುಬ್ಬಳ್ಳಿ ವಲಯ ಅರಣ್ಯ ಸಂರಕ್ಷಣಾಧಿಕಾರಿ