

ಶಿವಮೊಗ್ಗ: ಅನ್ಯ ಧರ್ಮಗಳಲ್ಲಿ ದೇವತಾ ಮಂದಿರ ಎಂಬುದು ಪಾಪವನ್ನು ಪರಿಹರಿಸಿಕೊಳ್ಳುವ ಸ್ಥಳ. ಆದರೆ ಹಿಂದುಗಳ ಪ್ರಕಾರ ದೇವತಾ ಮಂದಿರ ಎಂಬುದು ದೇವರುಗಳ ಸಾನ್ನಿಧ್ಯವಿರುವ ಸ್ಥಳ ಎಂದು ಕೂಡಲಿ ಶಾರದಾ ಪೀಠದ ಶ್ರೀ ಅಭಿನವ ಶಂಕರ ಭಾರತೀ ಸ್ವಾಮೀಜಿ ವಿಶ್ಲೇಷಿಸಿದರು.
ಬಾಪೂಜಿ ನಗರದಲ್ಲಿ ನೂತನವಾಗಿ ನಿರ್ಮಿಸಿರುವ ಶಿಲಾಮಯ ಗರ್ಭಗುಡಿ, ನೂತನ ಕೋದಂಡ ರಾಮ ಹಾಗೂ ಗರುಡ ಕಂಬದ ಪ್ರತಿಷ್ಠಾಪನಾ ಮಹೋತ್ಸವದಲ್ಲಿ ಬುಧವಾರ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ದೇವಸ್ಥಾನ ಎನ್ನುವುದು ಪ್ರಾರ್ಥನಾಲಯ ಅಲ್ಲ. ಅದು ದೇವರ ಸಾನ್ನಿಧ್ಯ ಇರುವ ಜಾಗ. ದೇವಾಲಯಗಳು ಸಮಾಜಕ್ಕೆ ಮಾರ್ಗದರ್ಶನ ನೀಡುವ ತಾಣಗಳು ಎಂದು ತಿಳಿಸಿದರು.
ದೇವತಾ ಸಾನ್ನಿಧ್ಯ ಗಟ್ಟಿಯಾಗಲು ಮೂರ್ತಿ ಪ್ರತಿಷ್ಠಾಪಿಸಿದ ನಂತರ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಪ್ರಾಣ ಪ್ರತಿಷ್ಠೆ ನೆರವೇರಿಸಲಾಗುತ್ತದೆ. 12 ವರ್ಷಗಳಿಗೊಮ್ಮೆ ಕುಂಬಾಭಿಷೇಕ ಇನ್ನಿತರ ಕಾರ್ಯಕ್ರಮಗಳನ್ನು ಮಾಡಲಾಗುತ್ತದೆ. ವಿಶೇಷವಾದ ಪ್ರಾಣ ಶಕ್ತಿಯನ್ನು ನೀಡುತ್ತೇವೆ. ಅಲ್ಲಿ ದೇವತಾ ಸಾನ್ನಿಧ್ಯ ವೃದ್ಧಿಯಾಗುತ್ತಿರುತ್ತದೆ. ದೇವರ ಮೂರ್ತಿ ಪ್ರತಿಷ್ಠಾಪನೆಗೂ ಮುನ್ನವೇ ಕಲ್ಲಿನ ಆಯ್ಕೆಯಿಂದ ಪ್ರಾಣ ಪ್ರತಿಷ್ಠೆಯವರೆಗೆ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ಆಚರಿಸಲಾಗುತ್ತದೆ ಎಂದರು.
ಪ್ರಾಚೀನ ಭಾರತದಲ್ಲಿ 7 ಲಕ್ಷಕ್ಕೂ ಹೆಚ್ಚು ದೇವಾಲಯದ ಆವರಣದಲ್ಲಿ ಗುರುಕುಲಗಳಿದ್ದವು. ಶೈಕ್ಷಣಿಕ ವ್ಯವಸ್ಥೆ ಇತ್ತು. ಪಠ್ಯಕ್ರಮಗಳಷ್ಟೇ ಶಿಕ್ಷಣವಲ್ಲ. ಜೀವನಕ್ಕೆ ಬೇಕಾದ ಎಲ್ಲ ಶಿಕ್ಷಣವನ್ನು ಆ ದೇವಾಲಯದ ಆವರಣದಲ್ಲಿ ನೀಡಲಾಗುತ್ತಿತ್ತು. ಪರಕೀಯರ ಆಡಳಿತದಲ್ಲಿ ಅದನ್ನು ನಿರ್ನಾಮ ಮಾಡಲಾಯಿತು ಎಂದು ಹೇಳಿದರು.
ಮಕ್ಕಳಿಗೆ ಬೇಕಾದ ಶಿಕ್ಷಣ ಹಿಂದಿನ ಕಾಲದಲ್ಲಿ ದೇವಾಲಯದ ಆವರಣದಲ್ಲಿ ಸಿಗುತ್ತಿತ್ತು. ವಿದ್ಯೆ ಕೊಡುವ ಜಾಗದಲ್ಲಿ ದೇವರು ಇರಬಾರದು ಎಂಬ ವಿಕೃತವಾದವನ್ನು ಇತ್ತೀಚಿನ ದಿನಗಳಲ್ಲಿ ಕಾಣುತ್ತಿದ್ದೇವೆ. ಸರಸ್ವತಿಯನ್ನು ಕಾಲೇಜಿನ ಆವರಣದಲ್ಲಿ ಪೂಜೆ ಮಾಡಬಾರದು ಎಂಬ ವಾದವು ಇತ್ತೀಚೆಗೆ ಕಂಡಿದ್ದೇವೆ. ಆದರೆ ದೇವರ ಸಾನ್ನಿಧ್ಯ ಶಿಕ್ಷಣವನ್ನು ಹತ್ತಿರಕ್ಕೆ ತರುತ್ತದೆ. ಮಠಮಂದಿರಗಳ ಕರ್ತವ್ಯ ಆಸ್ತಿ ಮಾಡುವುದಲ್ಲ , ಸಮಾಜಕ್ಕೆ ಮಾರ್ಗದರ್ಶನ ನೀಡುವುದು ಎಂದರು.
ಶಾಸಕ ಎಸ್.ಎನ್.ಚನ್ನ್ನಬಸಪ್ಪ, ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್, ಸೂಡಾ ಮಾಜಿ ಅಧ್ಯಕ್ಷ ಜ್ಯೋತಿಪ್ರಕಾಶ್, ನಗರ ಪಾಲಿಕೆ ಮಾಜಿ ಸದಸ್ಯರಾದ ಮೋಹನ್ ರೆಡ್ಡಿ, ಸುವರ್ಣಾ ಶಂಕರ್, ನಾಗರಾಜ್, ಸುರೇಖಾ ಮುರಳೀಧರ್ ಹಾಗೂ ಶ್ರೀರಾಮ ಸೇವಾ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.