

ಮಂಡ್ಯ : ಗ್ರಂಥಾಲಯಗಳು ಆಧುನಿಕ ಸಮಾಜದ ಕಣ್ಣುಗಳಿದ್ದಂತೆ. ಇವುಗಳನ್ನು ರಕ್ಷಿಸಿ ಬಳಸಿಕೊಂಡರೆ ಜೀವನದ ಪಥ ಬದಲಿಸಿದಂತಾಗುತ್ತದೆ ಎಂದು ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗಡೆ ಹೇಳಿದರು.
ಮದ್ದೂರು ಪಟ್ಟಣದ ಬಸವೇಶ್ವರ ನಗರದ ಶ್ರೀ ಮಹದೇಶ್ವರಸ್ವಾಮಿ ದೇವಸ್ಥಾನದಲ್ಲಿ ಸಂಸ್ಕೃತಿ ಲಯನ್ಸ್ ವತಿಯಿಂದ ಸ್ಥಾಪಿಸಿರುವ ಸಾರ್ವಜನಿಕ ಗ್ರಂಥಾಲಯವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದ ಅವರು, ಗ್ರಂಥಾಲಯ ಸ್ಥಾಪನೆ ಮಾಡಿರುವುದು ಅರ್ಥಪೂರ್ಣವಾಗಿದೆ. ಇಂತಹ ಪ್ರಯತ್ನಗಳು ಎಲ್ಲ್ಲ ಕಡೆಯೂ ನಡೆದರೆ ಓದುಗರ ಸಂಖ್ಯೆ ಹೆಚ್ಚಳವಾಗುವುದರ ಜತೆಗೆ ಸಮಾಜದ ಬದಲಾವಣೆಯಾಗಲು ಸಾಧ್ಯ. ಸಮಾಜಸೇವಕ ಸತೀಶ್ ಅವರು ಸ್ವಂತ ಹಣದ ಜತೆಗೆ ಸಂಘ ಸಂಸ್ಥೆಗಳ ಸಹಾಯದಿಂದ ಇಂತಹ ಪ್ರಯತ್ನ ಮಾಡಿರುವುದು ಶ್ಲಾಘನೀಯ. ಇಂಥ ಪ್ರಯತ್ನಗಳು ಎಲ್ಲೆಡೆ ನಡೆದರೆ ದೇವಾಲಯಗಳು ಶಾಂತಿಗಾಗಿ, ಗ್ರಂಥಾಲಯಗಳು ಜ್ಞಾನಕ್ಕಾಗಿ ಬಳಕೆಯಾಗಲಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದರು.
ನಾನು ಲೋಕಾಯುಕ್ತಕ್ಕೆ ಬಂದ ನಂತರದಲ್ಲಿ ಸಾಕಷ್ಟು ಅವ್ಯವಹಾರಗಳನ್ನು ಗಮನಿಸಿದ್ದೇನೆ. ಸರ್ಕಾರಗಳಲ್ಲಿ ಸಾಕಷ್ಟು ಹಣ ಸೋರಿಕೆಯಾಗುತ್ತಿದೆ, ಅದಕ್ಕೆ ವ್ಯವಸ್ಥೆಯೇ ಕಾರಣ. ದೇಶದಲ್ಲಿ ಹಲವು ದಶಕಗಳಿಂದ ದೊಡ್ಡ ದೊಡ್ಡ ಹಗರಣಗಳು ನಡೆದಿವೆ ಹಾಗೂ ಲಕ್ಷಾಂತರ ಕೋಟಿ ರೂ.ಗಳನ್ನು ರಾಜಕಾರಣಿಗಳು ಹಾಗೂ ಅಧಿಕಾರಿಗಳು ಕೊಳ್ಳೆ ಹೊಡೆದಿದ್ದಾರೆ. ಇದರಿಂದಾಗಿ ದೇಶದ ಅಭಿವೃದ್ಧಿಗೆ ಹಿನ್ನಡೆಯಾಗುತ್ತಿದೆ. ಭ್ರಷ್ಟ ಅಧಿಕಾರಿಗಳು ಹಾಗೂ ರಾಜಕಾರಣಿಗಳಿಗೆ ಮುನ್ನಡೆಯಾಗುತ್ತಿದೆ ಎಂಬುದು ವಿಪರ್ಯಾಸ ಎಂದರು.
ಹಿಂದೆ ನೀತಿ ಪಾಠವನ್ನು ಗುರು ಹಿರಿಯರು ಹೇಳುತ್ತಿದ್ದರು. ಅದಕ್ಕೆ ಆಗಿನ ಸಮಾಜ ನೆಮ್ಮದಿಯಾಗಿತ್ತು. ಆದರೆ ಈಗಿನ ಸಮಾಜ ಶ್ರೀಮಂತಿಕೆ ಹಾಗೂ ಅಧಿಕಾರವನ್ನು ಬಯಸುತ್ತಿರುವುದರಿಂದ ನೆಮ್ಮದಿ ಕಳೆದುಕೊಂಡು ಅಶಾಂತಿ ಉಂಟಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಇನ್ನೊಬ್ಬರಿಗೆ ಕೆಡಕನ್ನು ಮಾಡಿ ಹಣಸಂಪಾದನೆ ಮಾಡುವುದರಿಂದ ನೆಮ್ಮದಿ ಹೊಂದಲು ಸಾಧ್ಯವಿಲ್ಲ ಎಂಬುದನ್ನು ಅರಿತು ಜನರು ಪರಸ್ಪರ ಸಹಕಾರ ಮನೋಭಾವನೆಯಿಂದ ಪ್ರೀತಿ, ವಿಶ್ವಾಸದಿಂದ ಬದುಕಲು ಕಲಿಯಬೇಕು ಎಂದರು.
ಹೈಕೋರ್ಟ್ ನ್ಯಾಯಮೂರ್ತಿಗಳಾದ ಸಂದೇಶ್, ಶಿವಶಂಕರೇಗೌಡ, ಬೆಂಗಳೂರಿನ ಪೊಲೀಸ್ ಅಧಿಕಾರಿ ಸಿದ್ದರಾಜು, ಸಂಸ್ಕೃತಿ ಲಯನ್ಸ್ ತಾಲೂಕು ಅಧ್ಯಕ್ಷ ಲಯನ್ ಸತೀಶ್, ಧ್ವನಿ ಲಯನ್ಸ್ ತಾಲೂಕು ಅಧ್ಯಕ್ಷೆ ರಜನಿ ರಾಜ್, ಸಾಹಿತಿ ತೈಲೂರು ವೆಂಕಟಕೃಷ್ಣ, ವಕೀಲರ ಸಂಘದ ಅಧ್ಯಕ್ಷ ಶಿವಣ್ಣ, ಹಿರಿಯ ವಕೀಲ ಮಾದೇಗೌಡ, ತೈಲೂರು ಆನಂದಚಾರಿ ಇತರರು ಇದ್ದರು.