

ಬೆಳಗಾವಿ: ಬೈಲಹೊಂಗಲ ತಾಲೂಕು ಮತ್ತಿಕೊಪ್ಪದ ಕೃಷಿ ವಿಜ್ಞಾನ ಕೇಂದ್ರಕ್ಕೆ ದೆಹಲಿಯ ಭಾರತೀಯ ಕೃಷಿ ಅನುಸಂಧಾನ ಪರಿಷತ್‌ನ ಹಿರಿಯ ವಿಜ್ಞಾನಿಗಳು ಗುರುವಾರ ಭೇಟಿ ನೀಡಿ, ಕೇಂದ್ರದಲ್ಲಿ ಅಭಿವೃದ್ಧಿಪಡಿಸಿದ ಶೈಕ್ಷಣಿಕ ಕ್ಷೇತ್ರದ ವಿವಿಧ ತಾಕುಗಳು, ಹಣ್ಣು, ಹೂವು ಹಾಗೂ ತರಕಾರಿ ಬೆಳೆಗಳ ಪ್ರದರ್ಶನ ಕ್ಷೇತ್ರಗಳನ್ನು ವೀಕ್ಷಿಸಿದರು.
ಬಾಳೆ ಗೊನೆಗಳಿಗೆ ತೊಡಿಸಬಹುದಾದ ನೇಯ್ಗೆರಹಿತ ಬಟ್ಟೆ ಚೀಲದ ಬಗೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಕೇಂದ್ರದಲ್ಲಿ ನಡೆಯುತ್ತಿದ್ದ ಜಲಾನಯನ ಅಭಿವೃದ್ಧಿ ತರಬೇತಿ ಕಾರ್ಯಕ್ರಮದಲ್ಲಿ ರೈತರೊಂದಿಗೆ ಚರ್ಚಿಸಿದರು.
ತಂಡದಲ್ಲಿ ಬೆಂಗಳೂರಿನ ಕೃಷಿ ತಂತ್ರಜ್ಞಾನ ಅನ್ವಯಿಕ ಸಂಶೋಧನಾ ಸಂಸ್ಥೆಯ ಡಾ. ಡಿ.ವಿ. ಕೋಳೇಕರ, ಭಾರತೀಯ ಹುಲ್ಲುಗಾವಲು ಸಂಶೋಧನಾ ಸಂಸ್ಥೆ ಧಾರವಾಡ ವಲಯದ ಪ್ರಧಾನ ವಿಜ್ಞಾನಿ ಡಾ. ಬಿ.ಜಿ. ಶಿವಕುಮಾರ, ಹುಕ್ಕೇರಿ ಕೃಷಿ ಸಂಶೋಧನಾ ಕೇಂದ್ರ ಮುಖ್ಯಸ್ಥ ಡಾ. ಎಸ್.ಎಸ್. ನೂಲಿ ಇದ್ದರು.
ಬೆಂಗಳೂರು ಹೆಸರಘಟ್ಟದ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ಅಭಿವೃದ್ಧಿ ಪಡಿಸಿದ ಹಾಗೂ ಬೆಳಗಾವಿ ಜಿಲ್ಲೆಗೆ ಸೂಕ್ತವಾದ ಹಣ್ಣು, ಹೂವು ಹಾಗೂ ತರಕಾರಿ ಬೆಳೆಗಳ ಪ್ರದರ್ಶನ ಕ್ಷೇತ್ರಗಳನ್ನು ವೀಕ್ಷಿಸಿದರು.
ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಮಂಜುನಾಥ ಚೌರಡ್ಡಿ, ಕೇಂದ್ರದ ವಿವಿಧ ಚಟುವಟಿಕೆಗಳನ್ನು ವಿವರಿಸಿದರು. ವಿಜ್ಞಾನಿಗಳಾದ ಎಸ್.ಎಂ. ವಾರದ, ಪ್ರವೀಣ ಯಡಹಳ್ಳಿ, ಶಂಕರಗೌಡ ಪಾಟೀಲ ಇದ್ದರು.