ಮಾರೇನಹಳ್ಳಿಗೆ ಡಿಸಿ ನೇತೃತ್ವದ ಅಧಿಕಾರಿಗಳ ತಂಡ ಭೇಟಿ

IMG-20240828-WA0240
Published on

ಕೆ.ಆರ್.ಪೇಟೆ: ತಾಲೂಕಿನ ಮಾರೇನಹಳ್ಳಿ ಗ್ರಾಮದಲ್ಲಿ ಕಲುಷಿತ ನೀರು ಸೇವನೆಯಿಂದ ಇಬ್ಬರು ವೃದ್ಧೆ ಸಾವನ್ನಪ್ಪಿದ್ದು, ನಾಲ್ವರು ವಾಂತಿ, ಭೇದಿಯಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆಂಬ ಸುದ್ದಿ ಹರಡಿದ ಬೆನ್ನಲ್ಲೇ ಗ್ರಾಮಕ್ಕೆ ಬುಧವಾರ ಡಿಸಿ ಡಾ.ಕುಮಾರ ಅವರ ನೇತೃತ್ವದಲ್ಲಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿ, ಅಗತ್ಯ ಕ್ರಮ ತೆಗೆದುಕೊಳ್ಳಲು ಖಡಕ್ ಸೂಚಿಸಿದರು.

ಬಳಿಕ ಮಾತನಾಡಿದ ಡಿಸಿ, ಮೃತಪಟ್ಟಿರುವ ಒಬ್ಬ ವೃದ್ಧೆಗೆ 110 ವರ್ಷ, ಮತ್ತೊಬ್ಬರಿಗೆ 70 ವರ್ಷವಾಗಿದೆ. ಅವರು ಕಲುಷಿತ ನೀರು ಸೇವನೆಯಿಂದ ಮೃತಪಟ್ಟಿಲ್ಲ. ಹೃದಯಾಘಾತ ಸೇರಿ ಬೇರೆ ಕಾರಣಗಳಿಂದ ಮೃತಪಟ್ಟಿದ್ದಾರೆ. ಆಸ್ಪತ್ರೆಗೆ ದಾಖಲಾಗಿರುವವರಿಗೆ ವೈರಲ್ ಡಯೇರಿಯಾ ಆಗಿದೆ. ಕುಡಿವ ನೀರನ್ನು ಪರೀಕ್ಷೆಗೊಳಪಡಿಸಿದ್ದು, ಅದು ಕುಡಿಯಲು ಯೋಗ್ಯವಾಗಿರುವುದಾಗಿ ವರದಿ ಬಂದಿದೆ. ಸ್ವಂತ ಕೊಳವೆ ಬಾವಿ ನೀರನ್ನು ಹಲವು ಕುಟುಂಬ ಉಪಯೋಗಿಸುತ್ತಿದ್ದಾರೆ. ಆ ನೀರನ್ನು ಪರೀಕ್ಷೆಗೊಳಪಡಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಗ್ರಾಮಸ್ಥರು ಯಾವುದೇ ಆತಂಕಕ್ಕೆ ಒಳಗಾಗುವುದು ಬೇಡ ಈಗಾಗಲೇ ಕುಡಿಯುವ ನೀರಿನ ಪರೀಕ್ಷೆ ನಡೆಸಿರುವುದಾಗಿ ಆತ್ಮಸ್ಥೈರ್ಯ ತುಂಬಿದರು.

ಗ್ರಾಮಸ್ಥರ ಆತಂಕದ ಹಿನ್ನೆಲೆಯಲ್ಲಿ ವೈದ್ಯಕೀಯ ಸೌಲಭ್ಯ ಸಿಗುವಂತೆ ಜಿಲ್ಲಾಡಳಿತ ಕ್ರಮವಹಿಸಿದೆ. ಪ್ರತಿ ಮನೆಗೂ ವೈರಲ್ ಡಯೇರಿಯಾ ನಿಯಂತ್ರಣಕ್ಕೆ ಮಾತ್ರೆ, ಡಿಹೈಡ್ರೇಷನ್‌ಗೆ ಒಆರ್‌ಎಸ್ ಪೌಡರ್ ವಿತರಿಸಿದ್ದಾರೆ. ವೈದ್ಯಾಧಿಕಾರಿಗಳು ಗ್ರಾಮದಲ್ಲೇ ಮೊಕ್ಕಾಂ ಹೂಡಲಿದ್ದಾರೆ. ವೈದ್ಯರು ಗ್ರಾಮದ ಪ್ರತಿ ಮನೆಗಳಿಗೂ ಎರಡು ಬಾರಿ ಹೋಗಿ ಪರಿಶೀಲಿಸುತ್ತಿದ್ದಾರೆ. ತುರ್ತು ಪರಿಸ್ಥಿತಿ ಏನಾದರೂ ಎದುರಾದರೆ ಕೂಡಲೇ ಮಂಡ್ಯ ಮಿಮ್ಸ್ ಅಥವಾ ಹಾಸನದ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲು ವ್ಯವಸ್ಥೆ ಕಲ್ಪಿಸಿದ್ದಾರೆ. ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 24 ಗಂಟೆ ವೈದ್ಯಕೀಯ ಸೇವೆ ಕಲ್ಪಿಸಲಾಗಿದೆ. ಹೆಚ್ಚುವರಿ ವೈದ್ಯರು, ಸಮುದಾಯ ಆರೋಗ್ಯ ಅಧಿಕಾರಿ, ಆಂಬುಲೆನ್ಸ್ ಕೂಡ ನಿಯೋಜಿಸಿದ್ದು ಯಾವುದೇ ಅನಾಹುತ ಆಗದಂತೆ ಮುನ್ನಚ್ಚರಿಕೆ ಕ್ರಮವಾಗಿ ಸಕಲ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.

17 ಪ್ರಕರಣಗಳು ಪತ್ತೆ: ಕಳೆದ ಆರೇಳು ದಿನಗಳಿಂದ 17 ವೈರಲ್ ಡಯೇರಿಯಾ ಪ್ರಕರಣಗಳು ಪತ್ತೆಯಾಗಿವೆ. ಇಬ್ಬರು ಸಾವನ್ನಪ್ಪಿದ್ದು, 4 ರೋಗಿಗಳು ಹಾಸನ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ತೆಗೆದುಕೊಳ್ಳುತ್ತಿದ್ದಾರೆ. ಇವರೂ ಆರೋಗ್ಯವಾಗಿದ್ದು ಬೇಗ ಬಿಡುಗಡೆಯಾಗಲಿದ್ದಾರೆ. ಈ ಸಂಬಂಧ ಅಲ್ಲಿನ ವೈದ್ಯರೊಂದಿಗೆ ಸಂಪರ್ಕದಲ್ಲಿದ್ದೇವೆ. ರೋಗಿಗಳನ್ನು ಪರೀಕ್ಷೆಗೊಳಪಡಿಸಿದ್ದು ಅವರಿಗೆ ಕಲುಷಿತ ನೀರಿನಿಂದಾಗಲಿ, ಆಹಾರದಿಂದಾಗಲಿ ಅನಾರೋಗ್ಯ ಬಂದಿಲ್ಲ. ಆದ್ದರಿಂದ ವೈರಲ್ ಡಯೇರಿಯಾ ಎಂಬುದಾಗಿ ಆರೋಗ್ಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಉಳಿದವರು ಮನೆಯಲ್ಲೇ ಗುಣಮುಖರಾಗುತ್ತಿರುವುದಾಗಿ ಡಿಸಿ ತಿಳಿಸಿದರು. ಕುಡಿಯುವ ನೀರನ್ನು ಎರಡು ಬಾರಿ ಪರೀಕ್ಷೆ ನಡೆಸಿದ್ದು ಕುಡಿಯಲು ಯೋಗ್ಯವಾಗಿದೆ ಎಂಬ ವರದಿ ಬಂದಿದೆ. ಗ್ರಾಮಸ್ಥರು ಆತಂಕಕ್ಕೆ ಒಳಗಾಗುವುದು ಬೇಡ ಎಂದರು.

ವೈರಲ್ ಡಯೇರಿಯಾ ಆಗಿರುವ ಕುಟುಂಬಗಳಿಗೆ ಭೇಟಿ ನೀಡಿದ ಡಿಸಿ ಮಾಹಿತಿ ಪಡೆದರು. ಅಲ್ಲದೆ ಆರೋಗ್ಯ ವಿಚಾರಿಸಿದರು. ಬೇಗ ಗುಣಮುಖರಾಗುವಂತೆ ಆತ್ಮಸ್ಥೈರ್ಯ ತುಂಬಿದರು. ಕಡೆಗೆ ಗ್ರಾಮಸ್ಥರ ಸಭೆ ನಡೆಸಿ ಅಗತ್ಯ ಕ್ರಮವಹಿಸುವುದಾಗಿ ತಿಳಿಸಿದರು.
ಜಿಪಂ ಸಿಇಒ ಶೇಖ್ ತನ್ವೀರ್ ಆಸಿಫ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮೋಹನ್ ಸೇರಿದಂತೆ ಹಲವರು ಇದ್ದರು.

ಕೆ.ಆರ್.ಪೇಟೆ ತಾಲೂಕಿನ ಮಾರೇನಹಳ್ಳಿ ಗ್ರಾಮದಲ್ಲಿ ಕಲುಷಿತ ನೀರು ಸೇವನೆಯಿಂದ ಇಬ್ಬರು ವೃದ್ಧೆ ಮೃತಪಟ್ಟ ಸುದ್ದಿ ಹಿನ್ನೆಲೆಯಲ್ಲಿ ಗ್ರಾಮಕ್ಕೆ ಡಿಸಿ ಡಾ.ಕುಮಾರ ಅವರ ನೇತ್ರತ್ವದಲ್ಲಿ ಅಧಿಕಾರಿಗಳು ಬುಧವಾರ ಭೇಟಿ ನೀಡಿ ಪರಿಶೀಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net