ಆಲಮಟ್ಟಿ ಅಣೆಕಟ್ಟೆಗೆ ಸಿಎಂ ಬಾಗಿನ ಅರ್ಪಣೆ, ಸಿದ್ಧತೆ ಪರಿಶೀಲಿಸಿದ ಅಧಿಕಾರಿಗಳ ತಂಡ

BAGINA SIDDATE
ವಿಜಯಪುರದ ಆಲಮಟ್ಟಿ ಜಲಾಶಯದಲ್ಲಿ ಸಿಎಂ ಸಿದ್ದರಾಮಯ್ಯ ಬಾಗಿನ ಅರ್ಪಿಸಲು ಆಗಮಿಸುತ್ತಿರುವ ಹಿನ್ನೆಲೆ ಸಿದ್ಧತೆ ಪರಿಶೀಲಿಸಲಾಯಿತು. ಜಿಲ್ಲಾಧಿಕಾಟಿ ಟಿ.ಭೂಬಾಲನ್, ಎಸ್‌ಪಿ ಋಷಿಕೇಶ ಸೋನಾವಣೆ, ಕೆಬಿಜೆಎನ್‌ಎಲ್ ವ್ಯವಸ್ಥಾಪಕ ನಿರ್ದೇಶಕ ಕೆ.ಪಿ. ಮೋಹನ್‌ರಾಜ್ ಮತ್ತಿತರರಿದ್ದಾರೆ.
Published on

ವಿಜಯಪುರ: ಮಹಾರಾಷ್ಟ್ರದಲ್ಲಿ ಹೆಚ್ಚಿದ ಮಳೆಯ ಪ್ರಮಾಣದಿಂದಾಗಿ ಮೈದುಂಬಿ ಹರಿಯುತ್ತಿರುವ ಕೃಷ್ಣೆಗೆ ಬಾಗಿನ ಅರ್ಪಿಸಲು ಆಗಮಿಸುತ್ತಿರುವ ಸಿಎಂ ಸಿದ್ದರಾಮಯ್ಯ ಸ್ವಾಗತಕ್ಕೆ ಆಲಮಟ್ಟಿಯ ಲಾಲಬಹಾದ್ದೂರ ಶಾಸ್ತ್ರೀ ಜಲಾಶಯ ಬಣ್ಣದ ಬೆಳಕಿನೊಂದಿಗೆ ಝಗಮಗಿಸುತ್ತಿದೆ.

ಆ. 21ರಂದು ಮಧ್ಯಾಹ್ನ 12.30ಕ್ಕೆ ಸಿಎಂ ಸಿದ್ದರಾಮಯ್ಯ ಬಾಗಿನ ಅರ್ಪಿಸಲಿದ್ದಾರೆ. ತನ್ನಿಮಿತ್ತ ಮಂಗಳವಾರ ಜಲಾಶಯದ ಸುತ್ತ-ಮುತ್ತ ಸ್ವಚ್ಛತೆ, ಕಾರ್ಯಕ್ರಮಕ್ಕೆ ಸಿದ್ಧತೆ, ಬಣ್ಣದ ಕಾರಂಜಿಗಳ ಪರಿಶೀಲನೆಯಂಥ ಪೂರಕ ಚಟುವಟಿಕೆಗಳನ್ನು ಕೈಗೊಳ್ಳಲಾಯಿತು. ಜಿಲ್ಲಾಧಿಕಾಟಿ ಟಿ.ಭೂಬಾಲನ್, ಎಸ್‌ಪಿ ಋಷಿಕೇಶ ಸೋನಾವಣೆ, ಕೆಬಿಜೆಎನ್‌ಎಲ್ ವ್ಯವಸ್ಥಾಪಕ ನಿರ್ದೇಶಕ ಕೆ.ಪಿ. ಮೋಹನ್‌ರಾಜ್ ಸೇರಿದಂತೆ ಹಲವು ಅಧಿಕಾರಿಗಳು ಸ್ಥಳ ಪರಿಶೀಲಿಸಿದರು. ಜಲಾಶಯಕ್ಕೆ ಸೂಕ್ತ ಭದ್ರತೆ ಕಲ್ಪಿಸುವುದು, ಬಣ್ಣದ ಬೆಳಕಿನ ವ್ಯವಸ್ಥೆ ಕಲ್ಪಿಸುವುದು, ಪುಷ್ಪಾಲಂಕಾರ, ಬಾಗಿನ ಅರ್ಪಿಸುವ ಸ್ಥಳದಲ್ಲಿ ಬಣ್ಣದ ಲೇಪನದಂಥ ಮಹತ್ವದ ಕಾರ್ಯ ಕೈಗೊಳ್ಳಲಾಯಿತು.

ಪೊಲೀಸರು ಮುಂಚಿತವಾಗಿಯೇ ಭದ್ರತೆ ಕುರಿತು ಸಮಾಲೋಚಿಸಿದರು. ವಿಪತ್ತು ನಿರ್ವಹಣೆ ತಂಡ, ಅಗ್ನಿ ಶಾಮಕ ಅಧಿಕಾರಿಗಳು ಪೂರ್ವ ತಯಾರಿ ನಡೆಸಿದರು. ಪೂಜಾ ಸ್ಥಳ, ಪಾರ್ಕಿಂಗ್ ವ್ಯವಸ್ಥೆ, ಆಸನಗಳ ವ್ಯವಸ್ಥೆ, ಬ್ಯಾರಿಕೇಡ್ ಅಳವಡಿಕೆ, ಮಾಧ್ಯಮ ಪ್ರತಿನಿಧಿಗಳಿಗೆ ಅವಕಾಶ ಕಲ್ಪಿಸುವುದು, ವಿಡಿಯೋ ಚಿತ್ರೀಕರಣಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಸಿದ್ಧತೆ ಕೈಗೊಳ್ಳುವ ಬಗ್ಗೆ ಅಧಿಕಾರಿಗಳು ಸಮಾಲೋಚಿಸಿದರು. ಜಲಾಶಯದ ಸುತ್ತಲೂ ಬಿಗಿ ಬಂದೋಬಸ್ತ್ ಏರ್ಪಡಿಸುವ ಕುರಿತು ಅಧಿಕಾರಿಗಳು ತೀರ್ಮಾನ ಕೈಗೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net