ಬೇಕರಿ, ಕ್ಯಾಂಟೀನ್‌ಗಳಿಗೆ ಅಧಿಕಾರಿಗಳ ತಂಡ ದಿಢೀರ್ ದಾಳಿ

12-07-HNPP 25 02
ಹೊಳೆನರಸೀಪುರದ ಬೇಕರಿಯಲ್ಲಿ ಆಹಾರ ಸಿದ್ಧಪಡಿಸುವ ಸ್ಥಳವನ್ನು ಆಹಾರ ಸುರಕ್ಷತಾ ಅಧಿಕಾರಿ ವಿನಯ್, ಪುರಸಭೆ ಆರೋಗ್ಯಾಧಿಕಾರಿ ವಸಂತ್, ಅಧಿಕಾರಿಗಳಾದ ರಮೇಶ್, ಪಂಕಜಾ ಪರಿಶೀಲನೆ ನಡೆದರು.
Published on

ಹೊಳೆನರಸೀಪುರ: ಪಟ್ಟಣದ ಬೇಕರಿ, ಕ್ಯಾಂಟೀನ್‌ಗಳಲ್ಲಿ ಸುರಕ್ಷತೆ ಇಲ್ಲದೆ ಆಹಾರ ತಯಾರು ಮಾಡುತ್ತಿದ್ದರಿಂದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿರುವ ಹಿನ್ನೆಲೆಯಲ್ಲಿ ಪುರಸಭೆ ಅಧಿಕಾರಿಗಳು ಮತ್ತು ಆಹಾರ ಸುರಕ್ಷತೆ ಅಧಿಕಾರಿಗಳು ಶುಕ್ರವಾರ ದಾಳಿ ನಡೆಸಿ ಪರಿಶೀಲಿಸಿದರು.

‘ಅಶುಚಿತ್ವವಿದ್ದರೂ ಅಧಿಕಾರಿಗಳ ಮೌನ’ ಶೀರ್ಷಿಕೆಯಡಿ ಜು.9ರ ವಿಜಯವಾಣಿ ಪತ್ರಿಕೆಯಲ್ಲಿ ಪ್ರಕಟವಾದ ವಿಶೇಷ ವರದಿಯಿಂದ ಎಚ್ಚೆತ್ತ ಅಧಿಕಾರಿಗಳು ಪಟ್ಟಣದ ವಿವಿಧ ಮಳಿಗೆಗಳ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸಿದರು.

ಸಾರ್ವಜನಿಕ ಆಸ್ಪತ್ರೆಯ ಆಹಾರ ಸುರಕ್ಷತೆ ಅಧಿಕಾರಿ ವಿನಯ ನೇತೃತ್ವದಲ್ಲಿ ಪುರಸಭೆ ಆರೋಗ್ಯಾಧಿಕಾರಿ ವಸಂತ್, ಪಂಕಜಾ, ರಮೇಶ್ ಮತ್ತು ಪುರಸಭೆ ಸಿಬ್ಬಂದಿ, ಪಟ್ಟಣದ ಅಪ್ಪಾಜಿ ಕ್ಯಾಂಟೀನ್, ಪುಷ್ಪಗಿರಿ ಮೆಸ್, ಸ್ವಾಗತ್ ಹೋಟೆಲ್, ವಸಂತ ಬೇಕರಿ, ಶ್ರೀನಿವಾಸ ಬೇಕರಿ, ವೈಭವಿ ಬೇಕರಿ, ದುರ್ಗಾ ಬೇಕರಿ, ಪಾರ್ಕ್ ರಸ್ತೆಯ ವೆಂಕಿ ಪಲಾವ್ ಕ್ಯಾಂಟೀನ್, ತಾಲೂಕು ಕಚೇರಿ ಸಮೀಪದ ಬೀದಿ ಬದಿ ವ್ಯಾಪಾರಿಗಳಾದ ಪಾನಿಪೂರಿ ಅಂಗಡಿಗಳನ್ನು ಪರಿಶೀಲನೆ ಮಾಡಿದರು.

ಪಟ್ಟಣದ ಕೆಲ ಕ್ಯಾಂಟೀನ್‌ಗಳಲ್ಲಿ ಇಡ್ಲಿ ತಯಾರಿಕೆಗೆ ಪ್ಲಾಸ್ಟಿಕ್, ಪಾರ್ಸೆಲ್‌ಗೆ ಪ್ಲಾಸ್ಟಿಕ್ ಶೀಟ್ ಬಳಕೆ ಮಾಡುವವರಿಗೆ ಎಚ್ಚರಿಕೆ ನೀಡಿದರು. ಆಹಾರ ತಯಾರು ಮಾಡುವ ಸ್ಥಳ ಶುದ್ಧವಾಗಿಲ್ಲದ ಕಾರಣ ಮತ್ತು ಆಹಾರ ತಯಾರಿಕೆಗೆ ಉಪಯೋಗಿಸುವ ಸಾಮಗ್ರಿಗಳನ್ನು ವೀಕ್ಷಿಸಿದರು.

ಕೆಲ ಬೇಕರಿಗಳಲ್ಲಿಯೂ ಆಹಾರ ತಯಾರು ಮಾಡುವ ಸ್ಥಳ ಅಶುಚಿತ್ವದಿಂದ ಕೂಡಿದ್ದನ್ನು ಗಮನಿಸಿದ ಅಧಿಕಾರಿಗಳು ಬ್ರೆಡ್, ಕೇಕ್ ತಯಾರಿಸಲು ಉಪಯೋಗಿಸುವ ಪರಿಕರಗಳು ಸಂಪೂರ್ಣ ಹದಗೆಟ್ಟಿದ್ದು ಅವುಗಳನ್ನು ತೆರವುಗೊಳಿಸುವಂತೆ ಸೂಚನೆ ನೀಡಿದರು. ಬ್ರೇಡ್ ಇತರ ಆಹಾರ ಪದಾರ್ಥಗಳ ಪ್ಯಾಕಿಂಗ್ ಪ್ಲಾಸ್ಟಿಕ್‌ಶೀಟ್ ಬಳಸುವುದನ್ನು ತಪ್ಪಿಸಲು ಸೂಚಿಸಿದ ಅವರು, ಪ್ಲಾಸ್ಟಿಕ್‌ಶೀಟ್ ಕವರ್‌ಗಳನ್ನು ವಶಕ್ಕೆ ಪಡೆದರು. ಕೆಲ ಹೋಟೆಲ್‌ಗಳು ಮತ್ತು ಬೇಕರಿಗಳಲ್ಲಿ ಪ್ಲಾಸ್ಟಿಕ್ ಬಳಸದಂತೆ ಎಚ್ಚರಿಕೆ ನೀಡಿ ದಂಡ ವಿಧಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net