

ಹುಬ್ಬಳ್ಳಿ: ಶಿಕ್ಷಕರು ಯಾವತ್ತು ತಪ್ಪು ಮಾಡಬಾರದು. ಜಗತ್ತಿನಲ್ಲಿ ಯಾರೇ ತಪ್ಪು ಮಾಡಿದರು ಏನೂ ಅನ್ನದ ಜಗತ್ತು, ಶಿಕ್ಷಕರು ತಪ್ಪು ಮಾಡಿದರೆ ಕೈ ಮಾಡಿ ತೋರಿಸುತ್ತದೆ. ಕರ್ತವ್ಯ ಮಾಡಲಾಗದ ಶಿಕ್ಷಕರು ನೌಕರಿ ಬಿಟ್ಟು ಹೋಗಬೇಕು ಎಂದು ಪ್ರೊ. ಮೋಹನ ಸಿದ್ಧಾಂತಿ ಹೇಳಿದರು.
ನಗರದ ಕನಕದಾಸ ಶಿಕ್ಷಣ ಮಹಾವಿದ್ಯಾಲಯದ ಬಿ.ಎಡ್ ಸಭಾಂಗಣದಲ್ಲಿ ಕೆಆರ್‌ಎಂಎಸ್‌ಎಸ್ ಮತ್ತು ಎಬಿಆರ್‌ಎಸ್‌ಎಂ ವತಿಯಿಂದ ಶಿಕ್ಷಕರಿಗೆ ಶನಿವಾರ ಏರ್ಪಡಿಸಿದ್ದ ಕಾಯಕ ಸಂಕಲ್ಪ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಕ್ಕಳು ಪ್ರಶ್ನೆ ಕೇಳಿದಾಗ ಗದರಿಸದೆ ಸೂಕ್ತ ಉದಾಹರಣೆಗಳೊಂದಿಗೆ ಸಮಾಧಾನವಾಗಿ ಉತ್ತರಿಸಬೇಕು. ಶಿಕ್ಷಕರ ಕೈಯಲ್ಲಿ ಅಧಿಕಾರ ಬಂದಾಗ ಅದು ಮತ್ತೊಬ್ಬರಿಗೆ ಉಪಯೋಗಕಾರಿಯಾಗಬೇಕು. ವಿದ್ಯಾರ್ಥಿಗಳ ಜೀವನ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಬಹಳ ಪ್ರಮುಖ., ಶಿಕ್ಷಕನಿಗೆ ಸಮಯದ ಜಾಗೃತಿ ಅವಶ್ಯವಾಗಿ ಬರಬೇಕು. ಅದು ಬಂದರೆ ಅವರ ವ್ಯಕ್ತಿತ್ವ ಬದಲಾಗುತ್ತದೆ. ಒಳ್ಳೆಯ ಗುಣಗಳಿಂದ ಒಳ್ಳೆ ದಿನಗಳು ಬರಬೇಕಾರದೆ ಆಸಕ್ತಿಯಿಂದ ಶಿಕ್ಷಕ ವೃತ್ತಿಗೆ ಬರಬೇಕು. ರೊಕ್ಕ ಬೇಕೆಂದರೆ ಈ ವೃತ್ತಿಗೆ ಬರಬಾರದು ಎಂದರು.
ಎಬಿಆರ್‌ಎಸ್‌ಎಂ ನ ದಕ್ಷಿಣ ಮಧ್ಯ ಕ್ಷೇತ್ರಿಯ ಪ್ರಮುಖ ಡಾ. ರಘು ಅಕಮಂಚಿ ಮಾತನಾಡಿ, ಪ್ರತಿ ಶಿಕ್ಷಕರು ಗುರು ಆಗುವತ್ತ ಹೆಜ್ಜೆ ಹಾಕಬೇಕು. ನಿರಂತರ ಅಧ್ಯಯನಶೀಲರಾಗಿರಬೇಕು. ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿ ಹೆಚ್ಚಿಸುವವರಾಗಿದ್ದು ತಮ್ಮ ಕರ್ತವ್ಯ ಮತ್ತು ಜವಾಬ್ದಾರಿಯನ್ನು ಸದಾ ಪಾಲಿಸಬೇಕು ಎಂದರು.
ಕೆ.ಆರ್‌ಎಂ.ಎಸ್.ಎಸ್ ಅಧ್ಯಕ್ಷ ಸಂದೀಪ ಬೂದಿಹಾಳ, ಕೆ.ಯು.ಡಿ ವಿಭಾಗದ ಮಹಿಳಾ ಪ್ರಮುಖ ಪ್ರೊ. ಶೈಲಜಾ ಹುದ್ದಾರ ಸೇರಿದಂತೆ ಶಿಕ್ಷಕ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಉಪನ್ಯಾಸಕಿ ಶೋಭಾ ಉಜ್ಜಯಿನಶೆಟ್ಟರ ಪ್ರಾರ್ಥಿಸಿದರು. ಡಾ.ಸಿ.ವಿ ಮರಿದೇವರಮಠ ಅತಿಥಿಗಳನ್ನು ಪರಿಚಯಿಸಿದರು. ಬಸವರಾಜ ದೇವರಮನಿ ಸಂಕಲ್ಪ ಬೋಧನೆ ಮಾಡಿಸಿದರು. ಡಾ. ರಾಜಕುಮಾರ ಪಾಟೀಲ ನಿರೂಪಿಸಿದರು. ಡಾ. ಜಯಾನಂದ ಹಟ್ಟಿ ವಂದಿಸಿದರು.