

ಶಿಕಾರಿಪುರ: ಶಿಕ್ಷಣ ಕ್ಷೇತ್ರದಲ್ಲಿ ಹೊಸ ಹೊಸ ಆವಿಷ್ಕಾರಗಳಾಗುತ್ತಿವೆ. ಅದರ ಓಟಕ್ಕೆ ತಕ್ಕಂತೆ ವಿದ್ಯಾರ್ಥಿಗಳು ಹೊಂದಿಕೊಳ್ಳಬೇಕು. ಕಲಿಕೆಗೆ ವಯಸ್ಸಿನ ಮಿತಿಯಿಲ್ಲ. ಆದರೆ ಮಾನವೀಯ ಮೌಲ್ಯಗಳನ್ನು ಬಿಂಬಿಸುವ ಸಂಸ್ಕಾರಯುತ ಶಿಕ್ಷಣದ ಅಗತ್ಯವಿದೆ ಎಂದು ತೊಗರ್ಸಿ ಮಳೆಹಿರೇಮಠದ ಶ್ರೀ ಮಹಾಂತ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.
ತಾಲೂಕಿನ ತೊಗರ್ಸಿಯ ಪ್ರಾರ್ಥನಾ ಪಬ್ಲಿಕ್ ಶಾಲೆಯ ವಾರ್ಷಿಕೋತ್ಸವದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು, ಅಕ್ಷರ ಜ್ಞಾನ ನಮಗೆ ಸದಾ ಬೆಳಕಾಗಿ ಇರುತ್ತದೆ. ಸಾಕ್ಷರ ಸಮಾಜ ನಿರ್ಮಾಣದ ಹೊಣೆ ಎಲ್ಲರ ಮೇಲಿದೆ. ಪ್ರತಿ ಶಿಕ್ಷಕನ ಕನಸು ಕೂಡ ಪ್ರತಿ ಮಗುವೂ ಪ್ರತಿಭಾವಂತ ಆಗಬೇಕು ಎನ್ನುವುದು. ಅದರಂತೆಯೇ ಶಿಕ್ಷಕರು ಮತ್ತು ಪಾಲಕರ ಪರಿಶ್ರಮದ ಫಲವಾಗಿ ಉತ್ತಮ ಶಿಕ್ಷಣ ದೊರೆಯುತ್ತದೆ. ಖಾಲಿ ಹೃದಯಗಳಲ್ಲಿ ಅಕ್ಷರ ಬೀಜ ಬಿತ್ತುವವನೇ ಶಿಕ್ಷಕ ಎಂದರು.
ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳ ಕಡೆಗೂ ಹೆಚ್ಚಿನ ಗಮನ ಹರಿಸಬೇಕು. ಮಗುವಿನ ಅಂತರಾಳದ ಪ್ರತಿಭೆಯನ್ನು ಇಂತಹ ವಾರ್ಷಿಕೋತ್ಸವಗಳ ಮೂಲಕ ಹೊರ ತೆಗೆಯಬಹುದು. ಒಂದೊಂದು ಕಲೆಯಲ್ಲಿ ಒಂದೊಂದು ಮಗು ಪ್ರಬುದ್ಧತೆ ಪಡೆದಿರುತ್ತದೆ. ಅದನ್ನು ಗುರುತಿಸಿ ಅವಕಾಶ ನೀಡಬೇಕು. ಸಂಸ್ಕೃತಿ ನಮ್ಮ ತಾಯಿ ಬೇರು. ಇದರ ಅಡಿಯಲ್ಲಿ ಮಕ್ಕಳ ಪಾಠ-ಪ್ರವಚನದ ಜತೆಗೆ ಕಲೆ, ಸಾಹಿತ್ಯ, ಸಂಗೀತ, ಕ್ರೀಡೆ ಮುಂತಾದ ಗ್ರಾಮೀಣ ಪ್ರದೇಶದ ಜಾನಪದ ಕಲೆಗಳನ್ನು ಉಳಿಸಿ ಬೆಳೆಸಬೇಕು ಎಂದು ತಿಳಿಸಿದರು.
ಅರಣ್ಯ ಅಭಿವೃದ್ಧಿ ನಿಗಮದ ಮಾಜಿ ಉಪಾಧ್ಯಕ್ಷ ಕೆ.ರೇವಣಪ್ಪ ಮಾತನಾಡಿ, ಮಠ-ಮಂದಿರಗಳು ಅನಾದಿ ಕಾಲದಿಂದ ವಿದ್ಯಾ ದಾನ ಮಾಡುತ್ತಾ ಬಂದಿವೆ. ಗುರುಕುಲದಲ್ಲಿ ಮಗುವಿನ ಸರ್ವತೋಮುಖ ಬೆಳವಣಿಗೆಗಳ ಬಗ್ಗೆ ಗಮನ ಹರಿಸಲಾಗುತ್ತಿತ್ತು. ಕೇವಲ ಅಂಕ ಗಳಿಕೆಯ ಶಿಕ್ಷಣವಲ್ಲ. ವ್ಯಕ್ತಿತ್ವ ನಿರ್ಮಾಣ ಮಾಡುವ ಶಿಕ್ಷಣವೂ ಇಂದಿನ ಕಾಲಘಟ್ಟದಲ್ಲಿ ಅತ್ಯಗತ್ಯವಾಗಿದೆ ಎಂದರು.
ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಶಾಲೆಯ ನಿರ್ದೇಶಕಿ ರತ್ನಮ್ಮ, ಶಿಕ್ಷಕರನ್ನು ಪಾಲಕರ ಪರವಾಗಿ ಗೌರವಿಸಲಾಯಿತು. ಸಂಸ್ಥೆಯ ಅಧ್ಯಕ್ಷ ಬಿ.ಸಿ.ಮಲ್ಲಿಕಾರ್ಜುನ, ಕಾರ್ಯದರ್ಶಿ ಕರಿ ಬಸಮ್ಮ ಇತರರಿದ್ದರು. ಮಕ್ಕಳು ಪ್ರದರ್ಶಿಸಿದ ಸಾಂಸ್ಕೃತಿಕ ಕಾರ್ಯಕ್ರಮ ಎಲ್ಲರ ಗಮನ ಸೆಳೆದವು.