ವಿದ್ಯಾರ್ಥಿಗಳ ಬದುಕಿನ ಮಾರ್ಗದರ್ಶಕ ಶಿಕ್ಷಕ

A teacher is a guide in the lives of students.
A teacher is a guide in the lives of students.
Published on

 ಹುನಗುಂದ: ವಿದ್ಯಾರ್ಥಿಗಳ ಅಂತರಂಗದ ಅರಿವಿಗೆ ಹೊಸ ಸ್ಪರ್ಶ ನೀಡುವ ಶಿಕ್ಷಕ ವಿದ್ಯಾರ್ಥಿಗಳ ಬದುಕಿನ ಮಾರ್ಗದರ್ಶಕನೂ ಆಗಿರುತ್ತಾನೆ ಎಂದು ಚಿತ್ತರಗಿ ಸಂಸ್ಥಾನಮಠದ ಗುರುಮಹಾಂತ ಸ್ವಾಮಿಗಳು ಹೇಳಿದರು.

ಪಟ್ಟಣದ ವಿಜಯ ಮಹಾಂತೇಶ ಪ್ರೌಢಶಾಲೆಯ 1981-82ನೇ ಸಾಲಿನ ಹಳೆಯ ವಿದ್ಯಾರ್ಥಿಗಳು ವಿಜಯ ಮಹಾಂತೇಶ ಸಭಾಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಗುರುವಂದನಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ತಂದೆ- ತಾಯಿ ಮಗುವಿಗೆ ಜನ್ಮ ನೀಡಿದರೆ ಗುರು ತನ್ನಲ್ಲಿರುವ ಜ್ಞಾನ ಧಾರೆ ಎರೆದು ಶಿಷ್ಯರನ್ನು ಸಮಾಜದಲ್ಲಿ ಶ್ರೇಷ್ಠ ವ್ಯಕ್ತಿಗಳನ್ನಾಗಿ ರೂಪಿಸುವ ಮಹಾನ್ ಸಂತನಾಗಿರುತ್ತಾನೆ. ಧರ್ಮಾತೀತ, ಸೀಮಾತೀತವಾಗಿ ಮೇಲ್ಮಟ್ಟದ ಸ್ಥಾನ ಹೊಂದಿರುವ ಗುರು ಸದಾ ಸ್ಮರಣೀಯರಾಗಿರುತ್ತಾರೆ ಎಂದರು.

ಮುಖ್ಯ ಅತಿಥಿಗಳಾಗಿ ಮಾತನಾಡಿದ ಜಾನಪದ ವಿದ್ವಾಂಸ ಡಾ.ಶಂಭು ಬಳಿಗಾರ, ಅಕ್ಷರ ಮತ್ತು ಸಂಸ್ಕಾರ ಕಲಿಸುವ ಶಿಕ್ಷಕನಿಗೆ ಸಮಾಜದಲ್ಲಿ ಎಲ್ಲ ಕಾಲಕ್ಕೂ ಉನ್ನತ ಸ್ಥಾನಮಾನಗಳಿವೆ. ಮೌಲ್ಯಗಳು ಅಪಮೌಲ್ಯವಾಗುತ್ತಿರುವ ಪ್ರಸ್ತುತ ಸಂದರ್ಭದಲ್ಲೂ ಕಲಿಸಿದ ಗುರುವನ್ನು ಗುರುತಿಸಿ ಗೌರವಿಸುವ ಈ ಪರಂಪರೆ ಮಾದರಿಯಾಗಿದೆ ಎಂದರು.

ವಿ.ಮ.ವಿ.ವ ಸಂಘದ ಗೌರವ ಕಾರ್ಯದರ್ಶಿ ಡಾ.ಮಹಾಂತೇಶ ಕಡಪಟ್ಟಿ ಮಾತನಾಡಿ, ಉದಾತ್ತ ಆಲೋಚನೆ, ವಿದ್ಯಾರ್ಥಿಗಳ ಶ್ರೇಯಸ್ಸು ಮತ್ತು ವೃತ್ತಿಯನ್ನು ಗೌರವಿಸುವ ಶಿಕ್ಷಕರು ಸಮಾಜದ ಗೌರವಕ್ಕೆ ಪಾತ್ರರಾಗುತ್ತಾರೆ ಎಂಬುದಕ್ಕೆ ಈ ಕಾರ್ಯಕ್ರಮವೇ ಸಾಕ್ಷಿ ಎಂದರು.

ವಿದ್ಯೆ ಕಲಿಸಿದ ಗುರುಗಳು, ಸಿಬ್ಬಂದಿ ವರ್ಗದವರನ್ನು ಮತ್ತು ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು.

ಸನ್ಮಾನಿತರ ಪರವಾಗಿ ಎಂ.ಎನ್. ತೆನಹಳ್ಳಿ ಮತ್ತು ಎ.ಒ. ಬಿರಾದಾರ, ಮಾತನಾಡಿದರು. 1981-82ನೇ ಸಾಲಿನ ಗುರುವೃಂದ, ಸಿಬ್ಬಂದಿ ವರ್ಗ, ಡಾ.ಬಸವಲಿಂಗ ಶ್ರೀಗಳು ಇದ್ದರು.

ವಿನಯ ಹರಿಹರ ಪ್ರಾರ್ಥಿಸಿದರು. ಮುಖ್ಯಶಿಕ್ಷಕ ಬಸವರಾಜ ಬನ್ನಟ್ಟಿ ಸ್ವಾಗತಿಸಿದರು. ಸ್ನೇಹ ಬಳಗದ ಗೌರವಾಧ್ಯಕ್ಷ ಬಸವರಾಜ ಕಡಪಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿವೃತ್ತ ಉಪನ್ಯಾಸಕ ಸಿದ್ದಲಿಂಗಪ್ಪ ಬೀಳಗಿ ಪರಿಚಯಿಸಿದರು. ನಿವೃತ್ತ ಶಿಕ್ಷಕ ಸಂಗಣ್ಣ ಹುಂಡೇಕಾರ ನಿರೂಪಿಸಿದರು. ಸ್ನೇಹ ಬಳಗದ ಗೌರವಾಧ್ಯಕ್ಷ ಈಶ್ವರ ಗಡ್ಡಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net