

ಹೊಳೆನರಸೀಪುರ: ಬೈಕಿಗೆ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಶಿಕ್ಷಕರೊಬ್ಬರು ಮೃತಪಟ್ಟಿದ್ದಾರೆ.
ಹೊಳೆನರಸೀಪುರ ತಾಲೂಕಿನ ಬೆಳವಾಡಿ ನಿವಾಸಿ ಜಗದೀಶ್ (55) ಮೃತರು. ಸೋಮವಾರ ಮಧ್ಯಾಹ್ನ ಹಾಸನ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಪಟ್ಟಣದ ಕೆನರಾ ಬ್ಯಾಂಕ್ ಮುಂಭಾಗ ಶಿಕ್ಷಕ ಜಗದೀಶ್ ಬ್ಯಾಂಕಿನ ವ್ಯವಹಾರ ಮುಗಿಸಿ ಹೊರಬಂದು ಬೈಕ್ ತೆಗೆದುಕೊಳ್ಳುತ್ತಿರುವಾಗ ಮೈಸೂರು ಕಡೆಯಿಂದ ಬಂದ ಸಾರಿಗೆ ಬಸ್ ಡಿಕ್ಕಿ ಹೊಡೆದು ಮೇಲೆ ಹರಿದಿದೆ. ತೀವ್ರವಾಗಿ ಗಾಯಗೊಂಡ ಜಗದೀಶ್ ಅವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸುವ ವೇಳೆ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಅರಕಲಗೂಡು ತಾಲೂಕಿನಲ್ಲಿ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಇವರು ಪಟ್ಟಣದ ಚಿಟ್ಟನಹಳ್ಳಿ ಹೌಸಿಂಗ್ ಬೋರ್ಡ್‌ನಲ್ಲಿ ನೆಲೆಸಿದ್ದರು. ಮೃತರಿಗೆ ಶಿಕ್ಷಕಿ ಪತ್ನಿ, ಇಬ್ಬರು ಮಕ್ಕಳು ಇದ್ದಾರೆ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.