

ಶನಿವಾರಸಂತೆ: ಶಿಕ್ಷಕ, ಸೈನಿಕ ಹಾಗೂ ಕೃಷಿಕ ರಾಷ್ಟ್ರದ ಬೆನ್ನೆಲುಬಾಗಿದ್ದಾರೆ ಎಂದು ಆಲೂರು ಸಿದ್ದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಸುಪರ್ಣ ಕೃಷ್ಣಾನಂದ್ ಅಭಿಪ್ರಾಯಪಟ್ಟರು.
ಗುಡುಗಳಲೆ ಆರ್.ವಿ.ಕಲ್ಯಾಣ ಮಂಟಪದಲ್ಲಿ ಶನಿವಾರಸಂತೆ ರೋಟರಿ ಕ್ಲಬ್ ವತಿಯಿಂದ ಬುಧವಾರ ವಿವಿಧ ಕ್ಷೇತ್ರದ ಸಾಧಕರಿಗೆ ಹಮ್ಮಿಕೊಂಡಿದ್ದ ರೋಟರಿ ನೇಷನ್ ಬಿಲ್ಡರ್ಸ್ ಅವಾರ್ಡ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ದೇಶ ಕಟ್ಟುವ ಕಾರ್ಯ ಪ್ರತಿಯೊಬ್ಬರ ಕರ್ತವ್ಯವಾಗಿದೆ. ತಾಯಿ ಮಗುವಿಗೆ ಮೊದಲ ಗುರುವಾಗಿದ್ದಾಳೆ. ಮಕ್ಕಳಲ್ಲಿ ರಾಷ್ಟ್ರಭಕ್ತಿಯನ್ನು ಮನೆಯಿಂದಲೇ ಹುಟ್ಟುಹಾಕಬೇಕು ಎಂದರು.
ರೋಟರಿ ಕ್ಲಬ್ ಅಧ್ಯಕ್ಷ ಚಂದ್ರಕಾಂತ್ ಮಾತನಾಡಿ, ರೋಟರಿ ಸಂಸ್ಥೆ ಸಾಕಷ್ಟು ಸಮಾಜ ಮುಖಿ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದೆ. ಸಾಧಕರನ್ನು ಗೌರವಿಸುವ ಮೂಲಕ ಅವರಿಗೆ ಇನ್ನಷ್ಟು ಸ್ಫೂರ್ತಿ ತುಂಬಲಾಗುತ್ತಿದೆ ಎಂದು ಹೇಳಿದರು.
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಶನಿವಾರಸಂತೆ ಪವಿತ್ರ ಹೃದಯ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕಿ ರೋಹಿಣಿ ರವಿ, ಹಾಸನ ಜಿಲ್ಲೆ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಕೆ.ಆರ್. ಕಾಂತರಾಜ್ ಮತ್ತು ಕೆರಳ್ಳಿ ಗ್ರಾಮದ ಪ್ರಗತಿಪರ ಕೃಷಿಕ ಕಾಂತರಾಜ್ ಅವರಿಗೆ ರೋಟರಿ ನೇಷನ್ ಬಿಲ್ಡರ್ಸ್ ಅವಾರ್ಡ್ ನೀಡಿ ಗೌರವಿಸಲಾಯಿತು. ಸಮಾರಂಭದಲ್ಲಿ ರೋಟರಿ ಕ್ಲಬ್ ಕಾರ್ಯದರ್ಶಿ ಸೋಮಶೇಖರ್, ಸಂಸ್ಥೆಯ ಪದಾಧಿಕಾರಿಗಳು, ಸದಸ್ಯರು ಪಾಲ್ಗೊಂಡಿದ್ದರು.