

ಕೋಲಾರ: ಆಂಧ್ರಪ್ರದೇಶದ ವಲಸೆ ಕಾರ್ಮಿಕರಿಗೆ ಡ್ರಾಪ್ ಕೊಡುವ ನೆಪದಲ್ಲಿ ಟಾಟಾ ಏಸ್ ಚಾಲಕ ಲೈಂಗಿಕ ಕಿರುಕುಳ ಕೊಟ್ಟ ಪರಿಣಾಮ ಮಹಿಳೆ ಸೇರಿದಂತೆ ಸಾರ್ವಜನಿಕರು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಕೋಲಾರದಲ್ಲಿ ನಡೆದಿದೆ.
ಶ್ರೀನಿವಾಸಪುರ ತಾಲೂಕಿನ ನಾಗದೇವನಹಳ್ಳಿ ಬಳಿ ಮಧ್ಯರಾತ್ರಿ ಈ ಘಟನೆ ನಡೆದಿದೆ. ರೋಣೂರು ಗ್ರಾಮದ ಟಾಟಾ ಏಸ್ ಚಾಲಕ ಗೌಸ್ ಎಂಬಾತನಿಗೆ ಸಾರ್ವಜನಿಕರು ಥಳಿಸಿದ್ದಾರೆ. ಬಸ್ ವ್ಯವಸ್ಥೆ ಇಲ್ಲದ ಹಿನ್ನೆಲೆಯಲ್ಲಿ ಆಂಧ್ರ ಮೂಲದ ಕೂಲಿ ಕಾರ್ಮಿಕರು ಕುಟುಂಬ ಸಮೇತರಾಗಿ ಬೆಂಗಳೂರಿನಿಂದ ಆಂಧ್ರಪ್ರದೇಶಕ್ಕೆ ನಡೆದುಕೊಂಡು ಹೋಗುತ್ತಿದ್ದರು.
ಕುಟುಂಬಕ್ಕೆ ಸಹಾಯ ಮಾಡುವ ನೆಪದಲ್ಲಿ ಆಂಧ್ರದ ಬಾರ್ಡರ್ವರೆಗೂ ಬಿಡೋದಾಗಿ ಪುಸಲಾಯಿಸಿ ತನ್ನ ಟಾಟಾ ಏಸ್ ಗಾಡಿಯಲ್ಲಿ ಮಹಿಳೆ ಹಾಗೂ ಆಕೆಯ ಮಗಳನ್ನು ಮುಂದೆ ಕೂರಿಸಿಕೊಂಡಿದ್ದಾನೆ. ಮೊದಲೆ ಪ್ಲಾನ್ ಮಾಡಿಕೊಂಡಿದ್ದ ಚಾಲಕ ಗಂಡನನ್ನು ಹಿಂದೆ ಕೂರಿಸಿ, ನಂತರ ಚಾಲನೆ ಮಾಡುತ್ತಾ ಕಾಮ ದೃಷ್ಟಿಯನ್ನು ಮಹಿಳೆ ಮೇಲೆ ಬೀರಿದ್ದಾನೆ.
ಆಕೆಯ ಮೈ ಕೈ ಮುಟ್ಟಿ ಕಿರುಕುಳ ನೀಡಿದ್ದು, ಇದರಿಂದ ಎಚ್ಚೆತ್ತ ಮಹಿಳೆ ಕೂಡಲೆ ಗಾಡಿಯಿಂದ ಕೆಳಗಿಳಿದು ಚಾಲಕನನ್ನು ತರಾಟೆ ತೆಗೆದುಕೊಂಡಿದ್ದಾಳೆ. ಇನ್ನೂ ಶ್ರೀನಿವಾಸಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. (ದಿಗ್ವಿಜಯ ನ್ಯೂಸ್)