ಪ್ರತಿಭೆ ಅನಾವರಣಕ್ಕೆ ಪ್ರತಿಭಾ ಕಾರಂಜಿ ಪ್ರೇರಕ

19 TKE 2
Published on

ತರೀಕೆರೆ: ಸಾಂಸ್ಕೃತಿಕ ಸ್ಪರ್ಧೆಗಳ ಆಯೋಜನೆಯಿಂದ ಮಕ್ಕಳಲ್ಲಿ ಅಡಗಿರುವ ಪ್ರತಿಭೆ ಅನಾವರಣವಾಗಲಿದೆ ಎಂದು ಗ್ರಾಪಂ ಅಧ್ಯಕ್ಷೆ ಸುಜಾತಾ ಹೇಳಿದರು.

ಕರಕುಚ್ಚಿ ಗ್ರಾಮದ ಸರ್ಕಾರಿ ಶಾಲೆ ಆವರಣದಲ್ಲಿ ಏರ್ಪಡಿಸಿದ್ದ ಬಾವಿಕೆರೆ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಬಾವಿಕೆರೆ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ 14 ಹಿರಿಯ, 9 ಕಿರಿಯ ಪ್ರಾಥಮಿಕ ಶಾಲೆ ಮಕ್ಕಳು ಉತ್ಸುಕತೆಯಿಂದ ಪಾಲ್ಗೊಂಡಿದ್ದಾರೆ. ಅವರು ಪ್ರದರ್ಶಿಸುವ ಕಲೆಯನ್ನು ಪ್ರಶಸ್ತಿ ಸಲುವಾಗಿ ಅಲ್ಲದಿದ್ದರೂ, ಹುರಿದುಂಬಿಸುವ ಸಲುವಾಗಿಯಾದರೂ ಉತ್ತೇಜಿಸಬೇಕು ಎಂದರು.

ಕೆಡಿಪಿ ಪ್ರಗತಿ ಪರಿಶೀಲನಾ ಸಮಿತಿ ಸದಸ್ಯೆ ಜಿ.ಎಸ್.ರಚನಾ ಮಾತನಾಡಿ, ಪ್ರತಿಭಾ ಕಾರಂಜಿ ಕಾರ್ಯಕ್ರಮಕ್ಕೆ ಶಿಕ್ಷಣ ಇಲಾಖೆಯಿಂದ ಸಿಗುವ ಅನುದಾನ ಕಡಿಮೆಯಾದರೂ ಕರಕುಚ್ಚಿಯ ನಮ್ಮ ಶಾಲೆ ನಮ್ಮ ನೆನಪು ಟ್ರಸ್ಟ್‌ನ ನೆರವು ಹೆಚ್ಚಾಗಿದೆ. ಈ ಕಾರಣದಿಂದಲೇ ಕಾರ್ಯಕ್ರಮಕ್ಕೆ ಕಳೆ ಬಂದಿದೆ. ತೀರ್ಪುಗಾರರು ಸೂಪ್ತ ಪ್ರತಿಭೆಗಳನ್ನು ಗಮನಿಸಿ ಮುಂದಿನ ಹಂತಕ್ಕೆ ಆಯ್ಕೆ ಮಾಡಬೇಕು ಎಂದರು.

ಆಶು ಭಾಷಣ ಸ್ಪರ್ಧೆ, ಮಿಮಿಕ್ರಿ, ಚಿತ್ರಕಲೆ, ಕ್ಲೇ ಮಾಡಲಿಂಗ್, ಭಕ್ತಿಗೀತೆ, ಅಭಿನಯ ಗೀತೆ, ಛದ್ಮವೇಷ, ಕಂಠಪಾಠ, ಧಾರ್ಮಿಕ ಪಠಣ ಸೇರಿ ವಿವಿಧ ಸ್ಪರ್ಧೆ ಆಯೋಜಿಸಲಾಗಿತ್ತು.

ಎಸ್‌ಡಿಎಂಸಿ ಅಧ್ಯಕ್ಷೆ ಪುಷ್ಪ, ನೌಕರರ ಸಂಘದ ತಾಲೂಕು ಅಧ್ಯಕ್ಷ ಸಿ.ಅನಂತಪ್ಪ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಸಿ.ವಿ.ರವಿ, ನಮ್ಮ ಶಾಲೆ ನಮ್ಮ ನೆನಪು ಟ್ರಸ್ಟ್ ಅಧ್ಯಕ್ಷ ಎನ್.ವಿ.ಅರುಣ್‌ಕುಮಾರ್, ಮುಖ್ಯಶಿಕ್ಷಕ ದೇವೇಂದ್ರನಾಯ್ಕ, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಕುಮುದಾ, ತಾಲೂಕು ಜಾನಪದ ಸಾಹಿತ್ಯ ಪರಿಷತ್ ಅಧ್ಯಕ್ಷ ಆರ್.ನಾಗೇಶ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net