

ಹನೂರು: ಮಾದಪ್ಪನ ಸನ್ನಿಧಿಯಲ್ಲಿ ಸರತಿ ಸಾಲಿನಲ್ಲಿ ತೆರಳಿ ದೇವರ ದರ್ಶನ ಪಡೆಯುವ ಭಕ್ತರಿಗೆ ಶಾಶ್ವತ ನೆರಳಿನ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಶ್ರೀ ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎ.ಈ ರಘು ಮುಂದಾಗಿದ್ದು, ಮಂಗಳವಾರ ಮಳೆ ನಡುವೆಯೂ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು.
ಮಲೆ ಮಹದೇಶ್ವರ ಬೆಟ್ಟದ ಮಾದಪ್ಪನ ಸನ್ನಿಧಿಗೆ ಯುಗಾದಿ, ದೀಪಾವಳಿ, ಮಹಾ ಶಿವರಾತ್ರಿ, ಮಹಾಲಯ ಅಮಾವಾಸ್ಯೆ ಹಾಗೂ ಇನ್ನಿತರ ಜಾತ್ರೆ ಸೇರಿದಂತೆ ವಿಶೇಷ ಸಂದರ್ಭದಲ್ಲಿ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಿದ್ದು, ಸರತಿಯಲ್ಲಿ ಗಂಟೆಗಟ್ಟಲೇ ಸಾಗಿ ದೇವರ ದರ್ಶನ ಪಡೆಯುತ್ತಿದ್ದಾರೆ. ಹೀಗಾಗಿ ಭಕ್ತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಪ್ರಾಧಿಕಾರದ ವತಿಯಿಂದ ನೆರಳಿನ ವ್ಯವಸ್ಥೆಗಾಗಿ ಶಾಮಿಯಾನ ಹಾಕಲಾಗುತ್ತದೆ. ಆದರೂ ಮಳೆ ಹಾಗೂ ಬೇಸಿಗೆ ಸಂದರ್ಭದಲ್ಲಿ ಭಕ್ತರು ತೊಂದರೆ ಅನುಭವಿಸುತ್ತಿದ್ದರು. ಈ ಬಗ್ಗೆ ಭಕ್ತರಿಂದಲೂ ಆಕ್ಷೇಪ ವ್ಯಕ್ತವಾಗುತ್ತಿತ್ತು.
ಇದನ್ನು ಮನಗಂಡ ಕಾರ್ಯದರ್ಶಿ ಎ.ಈ ರಘು ಅವರು ಮಂಗಳವಾರ ಮಳೆಯ ನಡುವೆಯೂ ದೇಗುಲಕ್ಕೆ ತೆರಳಿ ಸರತಿ ಸಾಲಿನ ವ್ಯವಸ್ಥೆ ಪರಿಶೀಲಿಸಿದರು. ಇದೇ ವೇಳೆ ಚರಂಡಿ ವ್ಯವಸ್ಥೆಯ ಬಗ್ಗೆಯೂ ಪರಿಶೀಲಿಸಿದರು.
ವಿಜಯವಾಣಿಯೊಂದಿಗೆ ಮಾತನಾಡಿ, ಭಕ್ತರಿಗೆ ಶಾಶ್ವತ ನೆರಳಿನ ವ್ಯವಸ್ಥೆ ಒದಗಿಸುವ ದೆಸೆಯಲ್ಲಿ ಪರಿಶೀಲನೆ ನಡೆಸಲಾಗಿದ್ದು, ಸದ್ಯ ಮಳೆಯಾಗುತ್ತಿರುವ ಹಿನ್ನ್ನೆಲೆಯಲ್ಲಿ ವಾಟರ್ ಪ್ರೂಫ್ ಶಾಮಿಯಾನವನ್ನು ಹಾಕಲಾಗುವುದು. ಬಳಿಕ ಶೀಟ್ ಅಳವಡಿಸಿ ಭಕ್ತರಿಗೆ ಅನುಕೂಲ ಕಲ್ಪಿಸಲಾಗುವುದು ಎಂದು ತಿಳಿಸಿದರು.
ಅಲ್ಲದೆ ಜೋರು ಮಳೆ ಬಂತೆಂದರೆ ನಂದನವನಕ್ಕೆ ನೀರು ನುಗ್ಗಿ ಮಜ್ಜನ ಬಾವಿ ಮುಳುಗಡೆಯಾಗುತ್ತಿರುವುದರಿಂದ ಚರಂಡಿ ನಿರ್ಮಿಸುವ ಸಂಬಂಧ ಈಗಾಗಲೇ ಇಂಜಿನಿಯರ್ ಅವರಿಂದ ಯೋಜನೆ ರೂಪಿಸಿ ವರದಿ ಸಲ್ಲಿಸಲಾಗಿದೆ ಎಂದು ತಿಳಿಸಿದರು.