

ಬಾಳೆಹೊನ್ನೂರು: ಸ್ವಾತಂತ್ರ್ಯವೆಂದರೆ ಕೇವಲ ದೇಶಕ್ಕೆ ದೊರಕಿರುವುದು ಅಲ್ಲ. ಅದು ನಮಗೂ ವೈಯಕ್ತಿಕವಾಗಿ ದೊರಕಿರುವ ಸರಳತೆ, ಶಿಸ್ತು, ಸಂಯಮ ಎಂದು ಕೊಪ್ಪದ ಉಪನ್ಯಾಸಕಿ ದೀಪಾ ಹಿರೇಗುತ್ತಿ ಹೇಳಿದರು.
ಬಿ.ಕಣಬೂರು ಗ್ರಾಪಂನಿಂದ ಆಯೋಜಿಸಿದ್ದ ಸ್ವಾತಂತ್ರ್ಯೋತ್ಸವದಲ್ಲಿ ಮಾತನಾಡಿ, ಬದ್ಧತೆ, ತ್ಯಾಗದ ಸಂಕೇತ ಸ್ವಾತಂತ್ರೃ. ಯುವಜನರಿಗೆ ಮೊಬೈಲ್ ಸುಳ್ಳು ಸುಖ ನೀಡುತ್ತಿರುವುದರಿಂದ ಅನಾಹುತಗಳು ಹೆಚ್ಚಾಗುತ್ತಿವೆ. ಮೊಬೈಲ್‌ನಿಂದ ವಿದ್ಯಾರ್ಥಿಗಳು, ಯುವಜನರು ದೂರವಿರದಿದ್ದರೆ ಸ್ವಾತಂತ್ರ್ಯ ಕಳೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಬಿ.ಕಣಬೂರು ಗ್ರಾಪಂ ಅಧ್ಯಕ್ಷ ಸದಾಶಿವ ಆಚಾರ್ಯ ಮಾತನಾಡಿ, ಕಳೆದ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಭರವಸೆ ನೀಡಿದಂತೆ ಬಸ್ ನಿಲ್ದಾಣದ ಅಭಿವೃದ್ಧಿ, ಗ್ರಾಪಂ ನೂತನ ಸಭಾಂಗಣ ನಿರ್ಮಿಸಲಾಗಿದೆ. ಶೀಘ್ರದಲ್ಲಿ ಅವುಗಳನ್ನು ಉದ್ಘಾಟಿಸಲಾಗುವುದು ಎಂದರು.
ಗ್ರಾಪಂ ಉಪಾಧ್ಯಕ್ಷೆ ರಂಜಿತಾ, ಎಂಎಡಿಬಿ ಮಾಜಿ ಅಧ್ಯಕ್ಷೆ ಬಿ.ಸಿ.ಗೀತಾ, ಜಿಪಂ ಮಾಜಿ ಸದಸ್ಯರಾದ ಎಂ.ಎಸ್.ಚನ್ನಕೇಶವ, ಇಫ್ತಿಕಾರ್ ಆದಿಲ್, ಪಿಎಸಿಎಸ್ ಅಧ್ಯಕ್ಷ ಟಿ.ಎಂ.ಉಮೇಶ್ ಕಲ್ಮಕ್ಕಿ, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯೆ ಚಂದ್ರಮ್ಮ, ಬಗರ್‌ಹುಕುಂ ಸಮಿತಿ ಸದಸ್ಯೆ ಹೇಮಲತಾ, ಎನ್.ಶಶಿಧರ, ಸಿ.ಪಿ.ರಮೇಶ್, ಎಂ.ವಿ.ಶ್ರೀನಿವಾಸಗೌಡ, ಕೆ.ಎನ್.ರುದ್ರಪ್ಪಗೌಡ, ಕಾಶಪ್ಪ, ಇಬ್ರಾಹಿಂ ಶಾಫಿ, ಜಗದೀಶ್ಚಂದ್ರ, ಮಹೇಶ್, ಶಶಿಕಲಾ, ಪ್ರತಿಮಾ, ರವಿಚಂದ್ರ ಇತರರಿದ್ದರು.