

ಬಾಳೆಹೊನ್ನೂರು: ರಾತ್ರಿ-ಹಗಲು ಎನ್ನದೇ ನಿಸ್ವಾರ್ಥ ಸೇವೆ ಮಾಡುವ ವೈದ್ಯರ ಜೀವನ ಹಾಗೂ ಸೇವೆ ತ್ಯಾಗದ ಸಂಕೇತ ಎಂದು ಜೆಸಿಐ ಅಧ್ಯಕ್ಷ ಎನ್.ಶಶಿಧರ್ ಹೇಳಿದರು.
ಪಟ್ಟಣದ ಜೇಸಿಐ ಬಾಳೆಹೊನ್ನೂರು ಕ್ಲಾಸಿಕ್ ಸಂಸ್ಥೆಯಿಂದ ರಾಷ್ಟ್ರೀಯ ವೈದ್ಯರ ದಿನದ ಅಂಗವಾಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರನ್ನು ಸೋಮವಾರ ಗೌರವಿಸಿ ಮಾತನಾಡಿ, ವೈದ್ಯೋ ನಾರಾಯಣ ಹರಿಃ ಎಂದರೆ ವೈದ್ಯರು ನಾರಾಯಣ ಸ್ವರೂಪನು,ಅಂದರೆ ಭಗವಂತನ ಸ್ವರೂಪರಾಗಿದ್ದಾರೆ. ನಾರಾಯಣ ಎಂದರೆ ಸಮಚಿತ್ತ ವೃತ್ತಿಯುಳ್ಳುವರಾಗಿದ್ದು ಯಾವುದೇ ಬೇಧ ವಿಲ್ಲದೇ ಎಲ್ಲರನ್ನು ಸಮಾನವಾಗಿ ಕಾಣುವವರಾಗಿದ್ದಾರೆ ಎಂದರು.
ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹಲವು ಮೂಲ ಸೌಕರ್ಯಗಳು ಇಲ್ಲದಿದ್ದರೂ ಸಹ ವೈದ್ಯರಾದ ಪ್ರವೀಣ್ ನಿರಂತರ ಸೇವೆ ಸಲ್ಲಿಸುವ ಮೂಲಕ ರೋಗಿಗಳನ್ನು ಸಲಹುತ್ತಿದ್ದಾರೆ. ಯಾವಾಗ ಕರೆದರೂ ಕೂಡ ಬೇಸರಿಸಿಕೊಳ್ಳದೆ ರೋಗಿಗಳ ಸೇವೆಗೆ ಬರುತ್ತಿದ್ದಾರೆ. ಇವರ ಸೇವೆ ಇನ್ನೂ ಹೆಚ್ಚು ನಮಗೆ ಲಭಿಸಲಿ ಎಂದು ಕೋರಿದರು.
ಜೇಸಿಐ ಪೂರ್ವಾಧ್ಯಕ್ಷ ಸುಧಾಕರ್ ಮಾತನಾಡಿ, ವೈದ್ಯರು ನಮ್ಮಿಂದ ರೋಗ, ರುಜಿನವನ್ನು ಮಾತ್ರವಲ್ಲದೇ, ವೇದನೆ, ಅಶಾಂತಿ, ದುಃಖ ಮತ್ತು ವ್ಯಥ್ಯೆಯನ್ನು ಸಹ ದೂರ ಮಾಡಿ ನಮ್ಮಲ್ಲಿ ಆರೋಗ್ಯ, ಶಾಂತಿ, ಸಂತೋಷ ಹಾಗೂ ನೆಮ್ಮದಿ ಕರುಣಿಸಲಿದ್ದಾರೆ. ಮುಂದೆಯೂ ಸಹ ಹಲವು ವೈದ್ಯರು ತಮ್ಮ ತತ್ವಾದರ್ಶಗಳನ್ನು ಬಿಡದೇ ಸೇವಾ ಮನೋಭಾವ ಹೊಂದಿಕೊಂಡು ತಮ್ಮ ಕರ್ತವ್ಯ ಪಾಲನೆ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಪ್ರವೀಣ್ ಗೌರವ ಸ್ವೀಕರಿಸಿ ಮಾತನಾಡಿ, ರಾಷ್ಟ್ರೀಯ ವೈದ್ಯರ ದಿನದಂದು ನನನ್ನು ಗುರುತಿಸಿ ಗೌರವಿಸಿರುವುದು ಸಂತಸ ತಂದಿದೆ. ಎಲ್ಲರ ರೋಗ ದೂರ ಮಾಡಿ ನೆಮ್ಮದಿ ಜೀವನ ಕಲ್ಪಿಸುವುದೇ ವೈದ್ಯರ ಉದ್ದೇಶ. ಪಟ್ಟಣದಲ್ಲಿ ಎಲ್ಲಾ ಸಂಘ ಸಂಸ್ಥೆಗಳು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಉತ್ತಮ ಸಹಕಾರ ನೀಡುತ್ತಿದ್ದು, ಇದರಿಂದ ರೋಗಿಗಳಿಗೆ ಹೆಚ್ಚಿನ ಸೇವೆ ನೀಡಲು ಸಾಧ್ಯವಾಗಿದೆ ಎಂದರು.
ಜೇಸಿಐ ಪೂರ್ವಾಧ್ಯಕ್ಷ ಎಸ್.ಎಲ್.ಚೇತನ್, ಸದಸ್ಯರಾದ ವಿ.ರೋಹಿತ್, ಅಶೋಕ್, ಯು.ಸಿ.ಪ್ರದೀಪ್, ಚೇತನ್‌ಕುಮಾರ್, ಸನತ್‌ಶೆಟ್ಟಿ, ಹಿರಿಯ ಆರೋಗ್ಯ ನಿರೀಕ್ಷಕ ಭಗವಾನ್ ಮತ್ತಿತರರು ಹಾಜರಿದ್ದರು.