

ಮೈಸೂರು: ಮೈಸೂರು ಮಹಾನಗರ ಪಾಲಿಕೆ ಮತ್ತು ಶಾಲಾ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಜುಲೈ 18 ರಿಂದ 31 ರವರೆಗೆ ಮೊಬೈಲ್ ಆಪ್ ಮೂಲಕ ಶಾಲೆಗೆ ದಾಖಲಾಗಿ ಶಾಲಾ ಬಿಟ್ಟ ಮಕ್ಕಳು ಹಾಗೂ ಶಾಲೆಗೆ ದಾಖಲಾಗದೆ ಇರುವ ಮಕ್ಕಳ ಬಗ್ಗೆ ಸಮೀಕ್ಷೆ ನಡೆಸಲಾಗುತ್ತಿದೆ.
ಈ ಹಿನ್ನೆಲೆ ಮೈಸೂರು ಮಹಾನಗರ ಪಾಲಿಕೆಯ ವಲಯ ಕಚೇರಿ 01 ರಿಂದ 09 ರವರೆಗೆ ಎಲ್ಲ 65 ವಾರ್ಡ್ಗಳ ವ್ಯಾಪ್ತಿಯಲ್ಲಿ ಕಂದಾಯ ಅಧಿಕಾರಿಗಳ ಮೇಲ್ವಿಚಾರಣೆಯಲ್ಲಿ ಕಂದಾಯ ಪರಿಶೀಲಕರು ಮತ್ತು ಆರೋಗ್ಯ ನಿರೀಕ್ಷಕರ ತಂಡಗಳನ್ನು ರಚಿಸಲಾಗಿರುತ್ತದೆ. ಈ ತಂಡದಲ್ಲಿ ಶಾಲಾ ಶಿಕ್ಷಣ ಇಲಾಖೆ ಮತ್ತು ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆಗಳ ಸಹಯೋಗದಲ್ಲಿ ಸಮೀಕ್ಷೆಯನ್ನು ಕೈಗೊಳ್ಳಲಾಗುತ್ತದೆ. ಸದರಿ ತಂಡಗಳು ಆಯಾಯ ವಲಯ ಕಚೇರಿಗಳ ವ್ಯಾಪ್ತಿಯಲ್ಲಿರುವ ವಾರ್ಡ್ ಗಳ ಪ್ರತಿ ಮನೆಗೆ ಭೇಟಿ ನೀಡಿ 06 ರಿಂದ 16 ವರ್ಷದ ಶಾಲಾ ಬಿಟ್ಟ ಮಕ್ಕಳ ಸಮೀಕ್ಷೆಯನ್ನು ಮೊಬೈಲ್ ಅಪ್ಲಿಕೇಶನ್ ಆಪ್ ಮೂಲಕ ಮಾಡಬೇಕಾಗಿರುತ್ತದೆ.
ಈ ಸಂದರ್ಭದಲ್ಲಿ ಪಡಿತರ ಚೀಟಿ, ಆಧಾರ್ ಕಾರ್ಡ್ ಮತ್ತು ಎಸ್‌ಎಟಿಎಸ್ ಐಡಿ ದಾಖಲೆಗಳನ್ನು ಪಡೆದು ಮೊಬೈಲ್ ಆಪ್‌ನಲ್ಲಿ ವಿವರಗಳನ್ನು ನಮೂದಿಸಬೇಕಾಗಿದ್ದು, ಸದರಿ ತಂಡಗಳು ಸಮೀಕ್ಷೆ ಮಾಡಲು ಮನೆ ಮನೆಗೆ ಬಂದಾಗ ಪಡಿತರ ಚೀಟಿ ಆಧಾರ್ ಕಾರ್ಡ್ ಮತ್ತು ಎಸ್‌ಎಟಿಎಸ್ ಐಡಿ ದಾಖಲೆಗಳನ್ನು ನೀಡಿ ಸಾರ್ವಜನಿಕರು ಸಹಕರಿಸಬೇಕು ಎಂದು ಮೈಸೂರು ಮಹಾನಗರ ಪಾಲಿಕೆಯ ಆಯುಕ್ತರಾದ ಅಸಾದ್ ಉರ್ ರೆಹಮಾನ್ ಶರೀಫ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.