

ವಿಜಯವಾಣಿ ಸುದ್ದಿಜಾಲ ಧಾರವಾಡ
ಜಿಲ್ಲೆಯಲ್ಲಿ ಡೆಂಘೆ, ಜ್ವರ ಪ್ರಕರಣಗಳು ತೀವ್ರ ಗತಿಯಲ್ಲಿ ಕಾಣಿಸಿಕೊಳ್ಳುತ್ತಿವೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಆರೋಗ್ಯ ಇಲಾಖೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದು, ಲಾರ್ವಾ ಸಮೀೆಕ್ಷೆಯನ್ನು ಅಚ್ಚುಕಟ್ಟಾಗಿ ನಡೆಸುವ ಮೂಲಕ ರೋಗ ತಡೆಗೆ ಮುಂದಾಗಿದೆ.
ಡೆಂಘೆ ಸೊಳ್ಳೆಗಳಿಂದ ಬರುವ ರೋಗವಾಗಿದೆ. ಮನೆಗಳ ಸುತ್ತ ಶೇಖರಣೆಯಾಗುವ ನೀರಿನಿಂದಲೇ ರೋಗ ಹರಡಲಿದೆ. ಇದೇ ಕಾರಣಕ್ಕೆ ಆಶಾ ಕಾರ್ಯಕರ್ತೆಯರು, ಸ್ಥಳಿಯರು ಸೇರಿ ಲಾರ್ವಾ ಸಮೀಕ್ಷೆ ನಡೆಸುವುದರ ಜತೆಗೆ ಜನರಲ್ಲಿ ಜಾಗೃತಿ ಸಹ ಮೂಡಿಸುತ್ತಿದ್ದಾರೆ. ಪ್ರಕರಣಗಳು ಗ್ರಾಮೀಣ ಭಾಗದಲ್ಲೇ ಹೆಚ್ಚಾಗಿರುವ ಕಾರಣಕ್ಕೆ ಗ್ರಾಮೀಣ ಭಾಗದಲ್ಲೇ ಸಮೀಕ್ಷೆ ನಿಯಮಿತವಾಗಿ ಅತ್ಯಂತ ಅಚ್ಚುಕಟ್ಟಾಗಿ ಸಾಗಿದೆ. ಪ್ರತಿ 15 ದಿನಕ್ಕೊಮ್ಮೆ ಸರ್ವೇ ಕಾರ್ಯ ನಡೆಯಲಿದೆ.
ಪ್ರಕರಣ ಪತ್ತೆಯಾಗುವ ಗ್ರಾಮ ಅಥವಾ ನಗರದಲ್ಲಿ ಮನೆಗಳ ಸರ್ವೇ ನಡೆಸಲಾಗುತ್ತದೆ. ಮನೆ ಒಳಾಂಗಣ, ಹೊರಾಂಗಣದಲ್ಲಿ ಶೇಖರಿಸಿದ ನೀರಿನಲ್ಲಿ ಲಾರ್ವಾ ಸಮೀಕ್ಷೆ ನಡೆಸುತ್ತಾರೆ. ಒಂದೇ ವೇಳೆ ಲಾರ್ವಾ ಪತ್ತೆಯಾದಲ್ಲಿ ಕೂಡಲೇ ಮನೆಯ ಜನರ ಆರೋಗ್ಯ ತಪಾಸಣೆ ಸೇರಿ ಇತರ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುತ್ತಾರೆ. ಇದರ ಜತೆಗೆ ಡೆಂಘೆ ತಡೆಗೆ ಏನೆಲ್ಲ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂಬುದನ್ನೂ ಮನವರಿಕೆ ಮಾಡಿಕೊಡುತ್ತಿದ್ದಾರೆ.
ಸಂಶಯಾಸ್ಪದ ಜ್ವರ ಪ್ರಕರಣ ಕಂಡು ಬಂದಲ್ಲಿ ರಕ್ತದ ಮಾದರಿಯನ್ನು ನಿಯಮಿತವಾಗಿ ಪ್ರಯೋಗಾಲಯಕ್ಕೆ ಕಳುಹಿಸುವುದು, ಪಾಸಿಟಿವ್ ಕಂಡು ಬಂದ ಪ್ರಕರಣಗಳ ಕುರಿತು ಮೇಲಾಧಿಕಾರಿಗೆ ಮಾಹಿತಿ ನೀಡುವುದು, ಗ್ರಾಮದ ಜನರಿಗೆ, ಗ್ರಾಪಂ ಸದಸ್ಯರು, ಸಿಬ್ಬಂದಿ ಸೇರಿ ಎಲ್ಲ ಸ್ಥರದ ಜನರಲ್ಲಿ ಅರಿವು ಮೂಡಿಸುವಂತೆ ಇಲಾಖೆ ಸಿಬ್ಬಂದಿಗೆ ಸಹ ಆರೋಗ್ಯಾಧಿಕಾರಿ ಖಡಕ್ ಸೂಚನೆ ನೀಡಿದ್ದಾರೆ. ಅದರಂತೆ ಜಾಗೃತಿ ಕಾರ್ಯಗಳು ಭರದಿಂದ ಸಾಗಿವೆ.
ಲಾರ್ವಾ ಸಮೀಕ್ಷೆ ಕಾರ್ಯದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಶಶಿ ಪಾಟೀಲ ಅವರು ಸ್ವತಃ ಭಾಗಿಯಾಗಿದ್ದರಿಂದ ಕಾರ್ಯದಲ್ಲಿ ಗಂಭೀರತೆ ಕಂಡು ಬಂದಿದ್ದಲ್ಲದೆ, ರೋಗ ನಿಯಂತ್ರಣದಲ್ಲೂ ಕೊಂಚ ಯಶಸ್ಸು ಕಂಡಂತಾಗಿದೆ.
ಲಾರ್ವಾ ಸಮೀಕ್ಷೆ ಅತ್ಯಂತ ಅಚ್ಚುಕಟ್ಟಾಗಿ ನಡೆಯುತ್ತಿದೆ. ನಗರದ ಪ್ರದೇಶಗಳಲ್ಲಿ ಸಮೀಕ್ಷೆ ನಡೆಸಲು ಸಿಬ್ಬಂದಿ ಕೊರತೆ ಇರುವ ಕಾರಣಕ್ಕೆ ವಿಳಂಬವಾಗಿದೆ. ಪ್ರತಿ 15 ದಿನಕ್ಕೊಮ್ಮೆ ಸಮೀಕ್ಷೆ ನಡೆಸಲಾಗುವುದು. ಎಲ್ಲಡೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವೂ ನಡೆದಿದೆ.*ಡಾ. ಶಶಿ ಪಾಟೀಲ, ಜಿಲ್ಲಾ ಆರೋಗ್ಯಾಧಿಕಾರಿ