

ತುಮಕೂರು: ಅನಿರೀಕ್ಷಿತ ಬೆಳವಣಿಗೆಯಲ್ಲಿ ತುಮಕೂರು ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ಸುರೇಶ್ಗೌಡ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದು, ಜಿಲ್ಲಾ ರಾಜಕೀಯ ವಲಯದಲ್ಲಿ ಆಶ್ಚರ್ಯ ಮೂಡಿಸಿದೆ. ಮಾಜಿ ಶಾಸಕರೂ ಆದ ಸುರೇಶ್ಗೌಡ ಕಾಂಗ್ರೆಸ್ಗೆ ಹೋಗುತ್ತಾರೆ ಎಂಬ ಚರ್ಚೆಯೂ ಸಾರ್ವಜನಿಕ ವಲಯದಲ್ಲಿ ಶುರುವಾಗಿದೆ.
ಸುರೇಶ್ಗೌಡ, ಜಿಎಸ್ಬಿ ಜಟಾಪಟಿ: ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಬಿ.ಸುರೇಶ್ಗೌಡ ಏಕಾಏಕಿ ರಾಜೀನಾಮೆ ನೀಡಲು ಸಂಸದ ಜಿ.ಎಸ್.ಬಸವರಾಜು ಜತೆಗಿನ ಮುಸುಕಿನ ಗುದ್ದಾಟ ಕಾರಣ ಎನ್ನಲಾಗಿದೆ. ಸಂಸತ್ ಚುನಾವಣೆಯಲ್ಲಿ ಎಚ್.ಡಿ.ದೇವೇಗೌಡರೇ ವಿರೋಧಿ ಪಾಳಯದಲ್ಲಿ ಅಭ್ಯರ್ಥಿಯಾಗಿದ್ದರೂ ಒಕ್ಕಲಿಗರ ಕೋಟೆಯಲ್ಲಿ ಬಿಜೆಪಿಗೆ ಹೆಚ್ಚು ಮತಬರುವಂತೆ ಚುನಾವಣೆ ಮಾಡಿಕೊಟ್ಟಿದ್ದರೂ ಸಂಸದ ಜಿಎಸ್ಬಿ ಸಹಕಾರ ನೀಡುತ್ತಿಲ್ಲ ಎಂದು ಸುರೇಶ್ಗೌಡ ಆಪ್ತರ ಬಳಿ ಹೇಳಿಕೊಂಡಿರುವುದು ಬಿಜೆಪಿ ಆಂತರಿಕ ಜಗಳವನ್ನು ಬಹಿರಂಗವಾಗಿಸಿದೆ.
ಆರಂಭದಿಂದಲೂ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಜತೆಗೂ ಅಂತರ ಕಾಯ್ದುಕೊಂಡೇ ಪಕ್ಷ ಸಂಘಟನೆಯಲ್ಲಿ ತೊಡಗಿದ್ದ ಬಿ.ಸುರೇಶ್ಗೌಡಗೆ ಸಂಘ ಪರಿವಾರದ ನಂಟು ಕಡಿಮೆಯೇ, ಜಿಲ್ಲಾಧ್ಯಕ್ಷರಾಗಿದ್ದರೂ ತುಮಕೂರು, ಕೊರಟಗೆರೆ ಬಿಟ್ಟು ಹೊರಗೆಲ್ಲೂ ಪ್ರವಾಸ ನಡೆಸಿಲ್ಲ ಎಂಬ ಬಗ್ಗೆ ವರಿಷ್ಠರಿಗೂ ದೂರು ಹೋಗಿತ್ತು ಎನ್ನಲಾಗಿದೆ.
ತಾಪಂ, ಜಿಪಂ ಹಾಗೂ ವಿಧಾನ ಪರಿಷತ್ ಸ್ಥಾನಕ್ಕೆ ಚುನಾವಣೆ ಪೂರ್ವದಲ್ಲಿಯೇ ರಾಜೀನಾಮೆ ನೀಡುತ್ತಿರುವುದಕ್ಕೆ ಬಿಜೆಪಿಯಲ್ಲಿನ ಆಂತರಿಕ ಜಗಳವೇ ಕಾರಣ ಎನ್ನಲಾಗುತ್ತಿದೆ. ಪಕ್ಷ ಸಂಘಟನೆ ತುಮಕೂರು ಕೇಂದ್ರಿತವಾಗಿ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ವರಿಷ್ಠರೇ ರಾಜೀನಾಮೆಗೆ ಸೂಚಿಸಿದ್ದಾರೆ ಎಂಬ ಗುಸುಗುಸು ಬಿಜೆಪಿ ವಲಯದಲ್ಲಿದೆ.
ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ, ಸಂಸದ ಜಿ.ಎಸ್.ಬಸವರಾಜು ಹಾಗೂ ಜಿಲ್ಲಾಧ್ಯಕ್ಷ ಬಿ.ಸುರೇಶ್ಗೌಡ ನೇತೃತ್ವದಲ್ಲಿ ಪಕ್ಷದಲ್ಲಿ ಮೂರು ಬಣ ಸೃಷ್ಟಿಯಾಗಿರುವುದು ಗುಟ್ಟಾಗೇನೂ ಉಳಿದಿಲ್ಲ, ಪಕ್ಷ ಸಂಘಟನೆಗೆ ಬಣ ರಾಜಕೀಯದಿಂದ ಹಿನ್ನಡೆಯಾಗಿರುವುದೇ ರಾಜೀನಾಮೆಗೆ ಕಾರಣವಾಗಿರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.
ಅತ್ತ ಸುರೇಶ್ಗೌಡ, 'ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಹೆಚ್ಚು ಸಮಯ ಕಳೆಯಬೇಕಿರುವ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಿದ್ದೇನೆ. ಲೋಕಸಭಾ ಚುನಾವಣೆ, ಶಿರಾ ಉಪಚುನಾವಣೆ ಸವಾಲುಗಳನ್ನು ಎದುರಿಸಲು ಕ್ಷೇತ್ರದ ಜನರ ಆಶೀರ್ವಾದ, ಕೊಟ್ಟ ಧೈರ್ಯ ಕಾರಣ. ಜಿಲ್ಲಾಧ್ಯಕ್ಷನಾದ ನಂತರ ನನ್ನ ಕ್ಷೇತ್ರದ ಜನರ ಕಷ್ಟ, ಸುಖಗಳಿಗೆ ಸ್ಪಂದಿಸಲು ಸಮಯ ಸಾಕಾಗುತ್ತಿಲ್ಲ. ಹೀಗಾಗಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವ ನಿರ್ಧಾರ ಮಾಡಿದ್ದೇನೆ' ಎಂದು ಫೇಸ್ಬುಕ್ನಲ್ಲಿ ಸೋಮವಾರ ಬರೆದುಕೊಂಡಿದ್ದಾರೆ.
ಒಟ್ಟಾರೆ ಏಕಾಏಕಿ ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಒಕ್ಕಲಿಗ ಸಮುದಾಯದ ಮುಖಂಡ ರಾಜೀನಾಮೆ ನೀಡಿರುವುದು ಜಿಲ್ಲಾ ರಾಜಕೀಯದಲ್ಲಿ ವಿವಿಧ ಚರ್ಚೆಗೆ ಗ್ರಾಸವಾಗಿದೆ.
ಇಷ್ಟೆಲ್ಲ ಬೆಳವಣಿಗೆ ಬಳಿಕ ಮಂಗಳವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ತುಮಕೂರಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಾಧುದ್ವಾಮಿ, ಸುರೇಶ್ ಗೌಡ್ರು ರಾಜೀನಾಮೆ ಕೊಟ್ಟಿರೋದು ನನಗೆ ಗೊತ್ತಿಲ್ಲ. ಪಕ್ಷದ ತೀರ್ಮಾನಕ್ಕೆ ಅನುಯಾಯಿಗಳಾಗಿ ನಾವು ಹೋಗಬೇಕು. ಯಡಿಯೂರಪ್ಪನವರಿಂದಲೇ ನಾವೆಲ್ಲಾ ಕ್ಯಾಬಿನೇಟ್ ಮಿನಿಸ್ಟ್ರು ಆದವರು. ಸುರೇಶ್ ಗೌಡರಿಗೆ ಎಲ್ಲ ಸಹಕಾರ ಕೊಟ್ಟಿದ್ದೇವೆ. ಅವರು ಕರೆಯುವ ಎಲ್ಲ ಮೀಟಿಂಗ್ನಲ್ಲೂ ಮಾತನಾಡಿದ್ದೇವೆ. ಪಾರ್ಟಿ ವ್ಯವಹಾರಕ್ಕೂ, ಉಸ್ತುವಾರಿಗೂ ಸಂಬಂಧ ಇಲ್ಲ. ನಾನು ಸುರೇಶ್ ಗೌಡರ ವಿರುದ್ಧ ಯಾವುದೇ ಆರೋಪ ಮಾಡಿಲ್ಲ. ನಮ್ಮ ಕಡೆಯಿಂದ ಆಗುವ ಸಹಕಾರ ಕೊಡ್ತೇನೆ. ಸುರೇಶ್ ಗೌಡ್ರು ಕಾಂಗ್ರೆಸ್ಗೆ ಹೋಗುವ ತೀರ್ಮಾನ ತಗೋತಾರೆ ಎಂದು ನನಗನ್ನಿಸಿಲ್ಲ. ಸಣ್ಣಪುಟ್ಟ ಗೊಂದಲಗಳು ಇದ್ರೆ ಸೆಟ್ಲು ಮಾಡ್ಕೋತಾರೆ ಎಂದರು.