

ಕುಮಟಾ: ಪಟ್ಟಣದಿಂದ ಶಿರಗುಂಜಿ ಗ್ರಾಮ ಸುಮಾರು 20 ಕಿಮೀ ದೂರದಲ್ಲಿದ್ದರೂ ಪಾಲಕರು ಮಕ್ಕಳ ಶಿಕ್ಷಣಕ್ಕಾಗಿ ಪೇಟೆಮಂದಿಯಷ್ಟೇ ವಿಶೇಷ ಕಾಳಜಿ ವಹಿಸುತ್ತಿದ್ದಾರೆ. ಇಲ್ಲಿನ ಶಿಕ್ಷಕರು ಕೂಡಾ ಗುಣಮಟ್ಟದ ಶಿಕ್ಷಣ ನೀಡುತ್ತಿರುವುದು ಶಾಲೆಯ ಕೀರ್ತಿ ಹೆಚ್ಚಿಸಿದೆ ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು.
ತಾಲೂಕಿನ ಅಳಕೋಡ ಗ್ರಾಪಂ ವ್ಯಾಪ್ತಿಯ ಶಿರಗುಂಜಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸುವರ್ಣ ಮಹೋತ್ಸವ ಕಾರ್ಯಕ್ರಮಕ್ಕೆ ಶಾಸಕ ದಿನಕರ ಶೆಟ್ಟಿ ಭಾನುವಾರ ಚಾಲನೆ ನೀಡಿದರು. ಇದೇ ವೇಳೆ ಶಾಲೆಯಲ್ಲಿ ನೂತನವಾಗಿ ನಿರ್ವಣವಾಗಿರುವ ವಿವೇಕ ಕೊಠಡಿ, ಸೆಲ್ಕೋ ಸೋಲಾರ್ ಫೌಂಡೇಷನ್ ಮತ್ತು ಎಲ್ಐಸಿಎಚ್ಎಫ್ಎಲ್ ಬೆಂಗಳೂರು ಸಂಸ್ಥೆಯ ಸಹಯೋಗದಲ್ಲಿ ಸಜ್ಜುಗೊಳಿಸಿದ ಸ್ಮಾರ್ಟ್ ತರಗತಿ ಉದ್ಘಾಟಿಸಿದರು.
ನಮ್ಮ ಕ್ಷೇತ್ರದಲ್ಲಿ ಶಿಕ್ಷಣ, ಆರೋಗ್ಯ, ರಸ್ತೆ ಸೇರಿ ಜನರಿಗೆ ಅಗತ್ಯವಿರುವ ಮೂಲಸೌಕರ್ಯ ಒದಗಿಸುವಲ್ಲಿ ವಿಶೇಷ ಪ್ರಯತ್ನ ಮಾಡಿದ್ದೇನೆ. ‘ವಿವೇಕ ಕೊಠಡಿ’ ಎನ್ನುವುದು ಹಿಂದಿನ ಬಿಜೆಪಿ ಸರ್ಕಾರದ ಅಪೂರ್ವ ಪರಿಕಲ್ಪನೆಯಾಗಿದ್ದು, ರಾಜ್ಯಾದ್ಯಂತ ಅಗತ್ಯವಿರುವ ಶಾಲೆಗಳಲ್ಲಿ ನೂತನ ವರ್ಗಕೋಣೆಗಳನ್ನು ನಿರ್ಮಾಣ ಮಾಡಲಾಗಿದೆ. ನಮ್ಮ ತಾಲೂಕಿಗೆ ಒಟ್ಟು 27 ವಿವೇಕ ಕೊಠಡಿಗಳನ್ನು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನೀಡಿದ್ದಾರೆ. ಸ್ವಚ್ಛ ಹಾಗೂ ಸುಸಜ್ಜಿತ ವರ್ಗಕೋಣೆಯು ವಿದ್ಯಾರ್ಥಿಗಳ ಕಲಿಕೆಗೆ ಪೂರಕ ವಾತಾವರಣ ಒದಗಿಸುತ್ತದೆ ಎಂದರು.
ಅಳಕೋಡ ಗ್ರಾಪಂ ಅಧ್ಯಕ್ಷ ದೇವು ಟಿ. ಗೌಡ, ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಗಜಾನನ ಎನ್. ಪೈ, ತಾಪಂ ಪ್ರಭಾರ ಇಒ ಹಾಗೂ ಬಿಇಒ ರಾಜೇಂದ್ರ ಭಟ್, ಸಮನ್ವಯಾಧಿಕಾರಿ ರೇಖಾ ಸಿ. ನಾಯ್ಕ, ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ರವೀಂದ್ರ ಭಟ್ ಸೂರಿ, ಪಂಚಾಯಿತಿ ಸದಸ್ಯರಾದ ವಿನಾಯಕ ಎಲ್. ಅಂಬಿಗ, ಮಹಾಲಕ್ಷ್ಮಿ ಕೆ. ಗೌಡ, ಶ್ರೀಧರ ಎನ್. ಪೈ, ಎಸ್ಡಿಎಂಸಿ ಅಧ್ಯಕ್ಷ ಈಶ್ವರ ನಾಗಪ್ಪ ಗೌಡ, ಅಶೋಕ ಕೆ. ಪಿಕಳೆ, ಬಿಆರ್ಪಿ ರಾಘವೇಂದ್ರ ಹೆಗಡೆ, ಸಿಆರ್ಪಿ ಈಶ್ವರ ಭಟ್, ನಾರಾಯಣ ಜೋಗಿ ಗೌಡ, ಮುಖ್ಯಶಿಕ್ಷಕ ಮಾರುತಿ ಹಲಸಮಕ್ಕಿ, ಸೆಲ್ಕೋ ಸೋಲಾರ್ನ ಶಾಖಾ ವ್ಯವಸ್ಥಾಪಕ ದತ್ತಾರಾಮ ಭಟ್ ಇತರರಿದ್ದರು.