ನುಸುಳುಕೋರರಿಗೆ ತಕ್ಕ ಉತ್ತರ

Shobha karandlaje
Published on

ಹುಬ್ಬಳ್ಳಿ: ನುಸುಳುಕೋರರ ಪ್ರಚೋದನೆಯಿಂದ ಮಣಿಪುರದಲ್ಲಿ ಜಾತಿ, ಧರ್ಮಗಳ ನಡುವೆ ಸಂಘರ್ಷ ಉಂಟಾಗುತ್ತಿದೆ. ಕೇಂದ್ರ ಸರ್ಕಾರ ಇದಕ್ಕೆ ತಕ್ಕ ಉತ್ತರ ಕೊಡಲಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದಿನ ಸರ್ಕಾರ ಮಾಡಿದ ತಪ್ಪುಗಳಿಂದ ಭಾರತದ ಈಶಾನ್ಯ ಭಾಗದಲ್ಲಿ ನುಸುಳುಕೋರರು ಸೇರಿದ್ದಾರೆ. ಇವರ ವಿದ್ರೋಹಿ ಚಟುವಟಿಕೆಗಳಿಂದ ಅಮಾನವೀಯ ಕೃತ್ಯಗಳು ಹೆಚ್ಚುತ್ತಿವೆ. ಒಂದು ಕಾಲದಲ್ಲಿ ಈಶಾನ್ಯ ರಾಜ್ಯಗಳು ನಾವು ಭಾರತೀಯರು ಎಂದು ಹೇಳಿಕೊಳ್ಳಲು ಹಿಂದೆಟು ಹಾಕುತ್ತಿದ್ದರು. ಆಗಿನ ಸರ್ಕಾರ ಅವರನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಿತ್ತು. ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ದೇಶವನ್ನು ಒಗ್ಗೂಡಿಸುವ ಕೆಲಸ ಮಾಡಿದ್ದಾರೆ. ಈಗ ಆ ರಾಜ್ಯಗಳಿಗೂ ಸರ್ಕಾರದಿಂದ ಸಕಲ ಸೌಲಭ್ಯ ದೊರೆಯುತ್ತಿವೆ ಎಂದರು.

ನುಸುಳುಕೋರರು ವಿದ್ರೋಹಿ ಚಟುವಟಿಕೆ ನಡೆಸಿ, ದೇಶದಲ್ಲಿ ಶಾಂತಿ ಹದಗೆಡಿಸುತ್ತಿದ್ದಾರೆ. ಅವರನ್ನು ಸುಮ್ಮನೆ ಬಿಡುವ ಪ್ರಶ್ನೆಯೇ ಇಲ್ಲ. ಈಶಾನ್ಯ ರಾಜ್ಯಗಳಲ್ಲಿ ಮತ್ತೆ ಶಾಂತಿ ನೆಲೆಸುವಂತೆ ಮಾಡಲಾಗುವುದು. ಈ ಬಗ್ಗೆ ವಿರೋಧ ಪಕ್ಷಗಳು ರಾಜಕಾರಣ ಮಾಡುತ್ತಿವೆ. ಪಾರ್ಲಿಮೆಂಟ್​ನಲ್ಲಿ ಚರ್ಚೆ ಮಾಡುವುದನ್ನು ಬಿಟ್ಟು ಬೀದಿಗಿಳಿದಿದ್ದಾರೆ. ಆದರೆ, ಭಾರತ ಸರ್ಕಾರ ದೇಶದ ರಕ್ಷಣೆ ಮಾಡಲು ಹಾಗೂ ವಿರೋಧ ಪಕ್ಷದವರಿಗೆ ಉತ್ತರಿಸಲು ಸಿದ್ಧವಿದೆ. ಕೇಂದ್ರ ಸರ್ಕಾರವನ್ನು ಕೆಟ್ಟದಾಗಿ ಬಿಂಬಿಸುತ್ತಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರಾಜ್ಯ ವಿರೋಧ ಪಕ್ಷದ ನಾಯಕನನ್ನು ಶೀಘ್ರ ಆಯ್ಕೆ ಮಾಡಲಾಗುತ್ತದೆ. ಚುನಾವಣೆಗೂ ಮುನ್ನ ಕಾಂಗ್ರೆಸ್ ಕೊಟ್ಟ ಭರವಸೆ ಇನ್ನೂ ಈಡೇರಿಸಿಲ್ಲ. ಹಣಕಾಸಿನ ಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದ್ದೆ. 5 ಗ್ಯಾರಂಟಿಗಳನ್ನು ಮೊದಲ ಕ್ಯಾಬಿನೆಟ್​ನಲ್ಲಿ ಜಾರಿ ಮಾಡುತ್ತೇವೆ ಎಂದಿದ್ದರು. ಇನ್ನೂ ಮಾಡಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ ನಿಮ್ಮ ಮೊದಲ ಕ್ಯಾಬಿನೆಟ್ ಯಾವಾಗ? ಎಂದು ಪ್ರಶ್ನಿಸುವ ಮೂಲಕ ಕುಟುಕಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net