

ಹುಬ್ಬಳ್ಳಿ : ಹುಟ್ಟುವಾಗಲೇ ಬ್ರೇನ್ ಟ್ಯೂಮರ್ (ಮಿದುಳಿನ ಗಡ್ಡೆ) ಹಾಗೂ ಅಪರೂಪದ ಎನ್.ಎಫ್.1 ನೂನನ್ ಸಿಂಡೊ್ರೕಮ್ (ಅನುವಂಶಿಕತೆ ಕಾಯಿಲೆ) ನಿಂದ ಬಳಲುತ್ತಿದ್ದ 7 ತಿಂಗಳ ಗಂಡು ಮಗುವಿಗೆ ಶಸ್ತ್ರಚಿಕಿತ್ಸೆಯ ಮೂಲಕ ಗುಣಪಡಿಸುವಲ್ಲಿ ಹುಬ್ಬಳ್ಳಿಯ ಶ್ರೀ ಬಾಲಾಜಿ ನರರೋಗ ಆಸ್ಪತ್ರೆಯ ತಜ್ಞ ವೈದ್ಯರು ಯಶಸ್ವಿಯಾಗಿದ್ದಾರೆ.
ಧಾರವಾಡದ ದಂಪತಿಗೆ ಜನಿಸಿದ ಈ ಮಗುವಿಗೆ ಹುಟ್ಟಿದಾಗಲೇ ದೊಡ್ಡದಾದ ತಲೆ, ಮೂಗು ಸೋರುವಿಕೆ, ಕಿವಿ ಕೇಳದಿರುವಿಕೆ ಸಮಸ್ಯೆ ಇತ್ತು. ಕಣ್ಣುಗಳು ಹೊರಗೆ ಚಾಚಿಕೊಂಡಿದ್ದರಿಂದ ಮಲಗಿದಾಗಲೂ ಮಗು ಕಣ್ಣು ಬಿಟ್ಟುಕೊಂಡೇ ಮಲಗಿರುವಂತೆ ಭಾಸವಾಗುತ್ತಿತು. ಜತೆಗೆ ಮೂರ್ಚೆ (ಫಿಟ್ಸ್), ಉಸಿರಾಟ ತೊಂದರೆ ಸಹ ಕಾಣುತ್ತಿತ್ತು.
ಇದರಿಂದ ಆತಂಕಕ್ಕೀಡಾದ ಪೋಷಕರು, ಬೇರೆ ಬೇರೆ ಕಡೆ ಚಿಕಿತ್ಸೆ ಕೊಡಿಸಿದರೂ ಪ್ರಯೋಜನವಾಗಿರಲಿಲ್ಲ. ಚಿಕಿತ್ಸೆಯ ಒಂದೆರೆಡು ದಿನದ ನಂತರ ಮತ್ತೆ ಸಮಸ್ಯೆ ಮರುಕಳಿಸುತ್ತಿತ್ತು. ಕೊನೆಗೆ ವೖದ್ಯರು ಎಂ.ಆರ್.ಐ ಸ್ಕಾ್ಯನ್ ಮಾಡಿಸಿದಾಗ ಮಿದುಳಿನಲ್ಲಿ ಗಡ್ಡೆ ಹಾಗೂ ನೀರು ತುಂಬಿಕೊಂಡಿರುವುದು ಬೆಳಕಿಗೆ ಬಂತು. ಕೂಡಲೇ ಶ್ರೀ ಬಾಲಾಜಿ ಆಸ್ಪತ್ರೆಗೆ ಬಂದ ಪೋಷಕರು ಆಸ್ಪತ್ರೆಯ ಚೇರ್ಮನ್ ಹಾಗೂ ನರರೋಗ ತಜ್ಞ ಡಾ. ಕ್ರಾಂತಿಕಿರಣ ಅವರನ್ನು ಭೇಟಿ ಮಾಡಿ, ಮಗುವನ್ನು ಆಸ್ಪತ್ರೆಗೆ ದಾಖಲಿಸಿದರು.
ಚಿಕಿತ್ಸೆಗೆ ದಾಖಲಾದ ಒಂದೆರೆಡು ದಿನಗಳಲ್ಲಿಯೇ ಅತ್ಯಂತ ಕ್ಲಿಷ್ಟಕರವಾದ ಹಾಗೂ ಸತತ 4 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿ ಮಿದುಳಿನ ಗಡ್ಡೆ ನಿವಾರಿಸಿ ಮಗು ಚೇತರಿಸಿಕೊಳ್ಳುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಶಸ್ತ್ರಚಿಕಿತ್ಸೆ ಬಳಿಕ ಮಗುವಿನ ಆರೋಗ್ಯದಲ್ಲಿ ಸಾಕಷ್ಟು ಸುಧಾರಣೆ ಕಂಡಿದ್ದು, ದೊಡ್ಡದಾಗಿದ್ದ ತಲೆ ಸಾಮಾನ್ಯ ಸ್ಥಿತಿಗೆ ಬಂದಿದೆ, ಕಣ್ಣುಗಳ ಊತ ಕಡಿಮೆಯಾಗಿದೆ. ಮಗುವಿನಲ್ಲಿ ಮೂರ್ಚೆ ರೋಗ(ಫಿಟ್ಸ್) ಮಾಯವಾಗಿದೆ. ಮಗುವಿನ ಸಹಜ ಆರೋಗ್ಯ ಸ್ಥಿತಿಗೆ ಪೋಷಕರೂ ಸಹ ಸಂತಸಗೊಂಡಿದ್ದು, ಇದೀಗ ಆಸ್ಪತ್ರೆಯಿಂದ ಬಿಡುಗಡೆ ಹೊಂದಿ ಮನೆಗೆ ಮರಳಿದ್ದಾರೆ.
ಶಸ್ತ್ರಚಿಕಿತ್ಸಾ ತಂಡದಲ್ಲಿ ಡಾ. ಕ್ರಾಂತಿಕಿರಣ, ಡಾ. ಇತಿ ಸಿಂಗ್ ಪರಮಾರ್, ಡಾ. ಪ್ರಕಾಶ ವಾರಿ, ಡಾ. ಭೀಮಾಶಂಕರ, ಆಸ್ಪತ್ರೆಯ ಇತರ ವೖದ್ಯಕೀಯ ಸಿಬ್ಬಂದಿ ಇದ್ದರು.