ಕೆಪಿಎಸ್​ಸಿ ಪರೀಕ್ಷೆ ಬರೆಯದಿದ್ದರೂ ಕೃಷಿ ಮಾರಾಟ ಇಲಾಖೆ ಸಿಬ್ಬಂದಿಗೆ ಸಬ್​ ರಿಜಿಸ್ಟ್ರಾರ್​ ಹುದ್ದೆ ಭಾಗ್ಯ

KPSC Exam
Published on

ಬೆಂಗಳೂರು: ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಮುಖ್ಯ ಪೇದೆಯೊಬ್ಬರಿಗೆ ಕೆಪಿಎಸ್​ಸಿ ಪರೀಕ್ಷೆ ಬರೆಯದಿದ್ದರೂ ನೇರವಾಗಿ ಖಾಲಿ ಇರುವ ಎಫ್​ಡಿಎ ಹುದ್ದೆ ನೀಡಿದ ಬೆನ್ನಲ್ಲೇ ಇದೀಗ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧೀಕ್ಷಕ ಜಿ.ಎಸ್​. ಕುಮಾರಸ್ವಾಮಿಗೆ ಸರ್ಕಾರ ಉಪ ನೋಂದಣಾಧಿಕಾರಿ ಹುದ್ದೆ ಕರುಣಿಸಿದೆ.

ಮೈಸೂರು ಜಿಲ್ಲೆಯ ಸಂತೆಸರಗೂರಿನ ಕೃಷಿ ಮಾರಾಟ ಇಲಾಖೆಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಇವರಿಗೆ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ನೇರ ನೇಮಕಾತಿಯಡಿ ಖಾಲಿ ಇರುವ ಉಪ ನೋಂದಣಾಧಿಕಾರಿ ಹುದ್ದೆಗೆ ಶಾಶ್ವತ ವರ್ಗಾವಣೆ ಮೂಲಕ ವಿಲೀನಗೊಳಿಸಿ ಕಂದಾಯ ಇಲಾಖೆ ಆದೇಶಿಸಿದೆ. ಇಂತಹ ಕ್ರಮಗಳಿಂದ ಇಲಾಖೆಯಲ್ಲಿ ಹತ್ತಾರು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗೆ ಸೇವಾ ಹಿರಿತನ ಮತ್ತು ಬಡ್ತಿಯಿಂದ ವಂಚಿತರಾಗಲಿದ್ದಾರೆ ಎಂದು ಅಧಿಕಾರಿಗಳು ಹಾಗೂ ಇತರ ಸಬ್​ರಿಜಿಸ್ಟ್ರಾರ್​ಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕರ್ನಾಟಕ ಲೋಕಸೇವಾ ಆಯೋಗದ(ಕೆಪಿಎಸ್ಸಿ) ಸ್ಪರ್ಧಾತ್ಮಕ ಪರೀಕ್ಷೆಗಳಿಂದ ಈ ದರ್ಜೆಯ ಹುದ್ದೆಗಳು ಭತಿರ್ಯಾಗಬೇಕು. ಆದರೆ, ಕೆಲ ಅಧಿಕಾರಿಗಳು ಸಚಿವರು ಮತ್ತು ಶಾಸಕರ ಶಿಫಾರಸು ಪತ್ರದ ಮೇಲೆ ಈ ಇಲಾಖೆಗೆ ವಿಲೀನಗೊಳಿಸಿ ಲಗತ್ತಾದ ಜಾಗಗಳನ್ನು ಪಡೆದುಕೊಂಡು ಭ್ರಷ್ಟಚಾರವೆಸಗಿ ಸರ್ಕಾರದ ಹಣವನ್ನು ಲೂಟಿ ಮಾಡುತ್ತಿದ್ದಾರೆ. ಈವರೆಗೆ ಇಲಾಖೆಯಲ್ಲಿ ಹತ್ತಾರು ಸಿಬ್ಬಂದಿ ಈ ರೀತಿ ನೇಮಕಗೊಂಡಿದ್ದಾರೆ. ಕರ್ನಾಟಕ ನಾಗರಿಕ ಸೇವಾ ನಿಯಮ ಪ್ರಕಾರ ಒಂದು ಇಲಾಖೆಯಲ್ಲಿ ಸಮಾನ ಹುದ್ದೆ ಹೊಂದಿರುವ ನೌಕರರು ಇನ್ನೊಂದು ಇಲಾಖೆಗೆ ಒಂದು ಸಲ ವರ್ಗಾವಣೆಗೆ ಅವಕಾಶವಿದ್ದು, ಆದರೆ, ವಿಲೀನಕ್ಕೆ ಅವಕಾಶವೇ ಇಲ್ಲ. ವಿಶೇಷ ಜ್ಞಾನ, ಪರಿಣಿತಿ, ತಾಂತ್ರಿಕ ಹಾಗೂ ಆಡಳಿತಾತ್ಮಕ ಅನುಭವಗಳಡಿ ನಿಯೋಜನೆಗೆ ಅವಕಾಶವಿದೆ. ಇದನ್ನೇ ದುರ್ಬಳಕೆ ಮಾಡಿಕೊಂಡಿರುವ ಹಲವರು ಕಾಯಂ ಆಗಿ ನೆಲೆಯೂರುತ್ತಿದ್ದಾರೆ ಎಂದು ಹೆಸರೇಳಲಿಚ್ಚಿಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net