ಬಸ್​ನಿಂದ ಬಿದ್ದು ವಿದ್ಯಾರ್ಥಿನಿಗೆ ಗಂಭೀರ ಗಾಯ

Published on

ಮುಂಡರಗಿ: ಪರೀಕ್ಷೆ ಬರೆಯಲು ಕಾಲೇಜಿಗೆ ಹೊರಟಿದ್ದ ವಿದ್ಯಾರ್ಥಿನಿಯೊಬ್ಬಳು ಬಸ್​ನಿಂದ ಇಳಿಯುವಾಗ ಬಿದ್ದು ಗಂಭೀರವಾಗಿ ಗಾಯಗೊಂಡ ಘಟನೆ ಪಟ್ಟಣದ ಜಗದ್ಗುರು ತೋಂಟದಾರ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ಸಮೀಪ ಗುರುವಾರ ನಡೆದಿದೆ. ಪಟ್ಟಣದ ಚೈತ್ರಾ ಶಿವಪ್ಪ ಗಡಾದ ಎಂಬ ವಿದ್ಯಾರ್ಥಿನಿಯು ಜಗದ್ಗುರು ತೋಂಟದಾರ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್​ನಲ್ಲಿ ಪ್ರಥಮ ಬಿಎ ವ್ಯಾಸಂಗ ಮಾಡುತ್ತಿದ್ದಾಳೆ. ಕೊಪ್ಪಳ ಕಡೆಗೆ ತೆರಳುತ್ತಿದ್ದ ಬಸ್​ನಲ್ಲಿ ಪಟ್ಟಣದಿಂದ ಕಾಲೇಜಿಗೆ ಹೊರಟಿದ್ದಳು. ಕಾಲೇಜ್ ಸಮೀಪದಲ್ಲಿ ಬಸ್ ನಿಲುಗಡೆ ಮಾಡುವಂತೆ ವಿದ್ಯಾರ್ಥಿನಿ ಹೇಳಿ ಇಳಿಯಲು ಮುಂದಾಗಿದ್ದಳು. ಆದರೆ, ಚಾಲಕ ನಿಲ್ಲಿಸದಿದ್ದರಿಂದ ವಿದ್ಯಾರ್ಥಿನಿ ರಸ್ತೆ ಮೇಲೆ ಬಿದ್ದು ಗಂಭೀರ ಗಾಯವಾಗಿದೆ. ತಾಲೂಕಾಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಗದಗ ಜಿಮ್ಸ್​ಗೆ ಕಳುಹಿಸಲಾಗಿತ್ತು. ಅಲ್ಲಿಂದ ಹುಬ್ಬಳ್ಳಿ ಕಿಮ್ಸ್​ಗೆ ಕಳುಹಿಸಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net