

ತುಮಕೂರು: ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಬೇಕಿದ್ದ ವಿದ್ಯಾರ್ಥಿಗೆ ಕರೊನಾ ಸೋಂಕು ತಗುಲಿದ್ದು, ಆತ ಪರೀಕ್ಷೆಯಿಂದ ದೂರ ಉಳಿಯುವಂತಾಯಿತು.
ಶಿರಾ ತಾಲೂಕಿನ ಕಾಮಗೊಂಡನಹಳ್ಳಿ 15 ವರ್ಷದ ವಿದ್ಯಾರ್ಥಿ ಜೂನ್ 22 ರಂದು ತಂದೆ ಜತೆ ಆಂಧ್ರಪ್ರದೇಶದ ಅನಂತಪುರ ಜಿಲ್ಲೆ ರಾಯದುರ್ಗ ತಾಲೂಕಿನಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲು ಬಂದಿದ್ದ. ಆಂಧ್ರದಿಂದ ಬಂದಿದ್ದ ಕಾರಣ ಜೂ.24ರಂದು ವಿದ್ಯಾರ್ಥಿ ಹಾಗೂ ಆತನ ತಂದೆಯ ಗಂಟಲುದ್ರವ ಸಂಗ್ರಹಿಸಿ ಕರೊನಾ ಪರೀಕ್ಷೆಗೆ ಕಳುಹಿಸಲಾಗಿತ್ತು. ಗುರುವಾರ ಪರೀಕ್ಷೆಗೆ ತೆರಳಲು ಸಿದ್ಧನಾಗುತ್ತಿದ್ದ ವಿದ್ಯಾರ್ಥಿಯ ಕರೊನಾ ಪರೀಕ್ಷೆ ವರದಿ ಪಾಸಿಟಿವ್ ಬಂದ ಕಾರಣ ತಕ್ಷಣವೇ ಆತನನ್ನು ಜಿಲ್ಲಾ ಕರೊನಾ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆತನ ತಂದೆಯಲ್ಲಿ ಸೋಂಕು ಕಂಡುಬಂದಿಲ್ಲ.
ಐವರು ಸ್ನೇಹಿತರಿಗೂ ಆತಂಕ: ಪಟ್ಟನಾಯಕನಹಳ್ಳಿ ಪರೀಕ್ಷಾ ಕೇಂದ್ರಕ್ಕೆ ತೆರಳಿ ರಿಜಿಸ್ಟ್ರಾರ್ ನಂಬರ್ ಯಾವ ಕೊಠಡಿಯಲ್ಲಿ ಇದೆ ಎಂಬುದನ್ನು ಖಚಿತ ಪಡಿಸಿಕೊಳ್ಳಲು ಸೋಂಕಿತ ವಿದ್ಯಾರ್ಥಿ ಜತೆಗೆ ಹೋಗಿದ್ದ ಆತನ ಐವರ ಸ್ನೇಹಿತರಿಗೆ ಆತಂಕವಾಗಿದ್ದು, ಅವರನ್ನು ಗುರುತಿಸಿ ಪ್ರತ್ಯೇಕವಾಗಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಲಾಗಿತ್ತು.
ತಾಯಿಗೆ ಸೋಂಕು: ರಾಯದುರ್ಗದಲ್ಲಿದ್ದ ವಿದ್ಯಾರ್ಥಿ ತಾಯಿಗೆ ಸೋಂಕು ತಗುಲಿರುವುದು ಬುಧವಾರ ಬೆಳಗ್ಗೆ ದೃಢಪಟ್ಟಿತ್ತು. ಅಲ್ಲಿನ ಜಿಲ್ಲಾಡಳಿತ ಮಾಹಿತಿ ಹಂಚಿಕೊಂಡ ಹಿನ್ನೆಲೆಯಲ್ಲಿ ಸಂಜೆಯೇ ವಿದ್ಯಾರ್ಥಿ ಹಾಗೂ ಆತನ ತಂದೆಯನ್ನು ಹೋಂಕ್ವಾರಂಟೈನ್‌ನಲ್ಲಿ ಇರಿಸಲಾಗಿತ್ತು. ಜತೆಗೆ ಗಂಟಲುದ್ರವ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿತ್ತು. ಗುರುವಾರ ಪರೀಕ್ಷೆ ವರದಿ ಬಂದಿದ್ದು ವಿದ್ಯಾರ್ಥಿಗೆ ಸೋಂಕು ತಗುಲಿರುವುದು ದೃಢಪಟ್ಟಿರುವುದರಿಂದ ಆತನಿಗೆ ಪರೀಕ್ಷೆ ಬರೆಯಲು ಅವಕಾಶ ಕೊಡಲಿಲ್ಲ. ಈತನ ಪ್ರಾಥಮಿಕ ಸಂಪರ್ಕದಲ್ಲಿದ್ದ ಐವರನ್ನು ಸಾಂಸ್ಥಿಕ ಕ್ವಾರಂಟೈನ್‌ನಲ್ಲಿರಿಸಲಾಗಿದೆ. ಪಟ್ಟನಾಯಕನಹಳ್ಳಿ ಹಾಗೂ ಕಾಮಗೊಂಡನಹಳ್ಳಿ ಹೊಂದಿಕೊಂಡಿದ್ದು, ಪಟ್ಟನಾಯಕನಹಳ್ಳಿಯನ್ನು ಕಂಟೈನ್ಮೆಂಟ್ ವಲಯವೆಂದು ಘೋಷಿಸಲಾಗಿದೆ.
ಕರೊನಾ ಸೋಂಕಿತ ವಿದ್ಯಾರ್ಥಿಯನ್ನು ಮೊದಲೇ ಹೋಂ ಕ್ವಾರಂಟೈನ್ ಮಾಡಲಾಗಿತ್ತು. ಗುರುವಾರ ಸೋಂಕು ದೃಢಪಟ್ಟಿದ್ದು, ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಆತ ಹಾಜರಾಗಿಲ್ಲ. ಯಾರೂ ಆತಂಕ ಪಡುವ ಅಗತ್ಯವಿಲ್ಲ. ಡಾ.ನಾಗೇಂದ್ರಪ್ಪ ಡಿಎಚ್‌ಒ