ವಿದ್ಯುತ್ ಆಘಾತಕ್ಕೆ ವಿದ್ಯಾರ್ಥಿನಿ ಬಲಿ : ಗದ್ದೆಗೆ ತುಂಡಾಗಿ ಬಿದ್ದಿದ್ದ ತಂತಿ ಸ್ಪರ್ಶಿಸಿ ಮೃತ್ಯು

Ashni
ಆಶ್ನಿ ಶೆಟ್ಟಿ
Published on

ವಿಜಯವಾಣಿ ಸುದ್ದಿಜಾಲ ಗುರುಪುರ

ಧಾರಾಕಾರ ಗಾಳಿ-ಮಳೆಗೆ ಗುರುಪುರ ಪಂಚಾಯಿತಿ ವ್ಯಾಪ್ತಿಯ ಮೂಳೂರು ಗ್ರಾಮದ ಕಲ್ಲಕಲಂಬಿ ಎಂಬಲ್ಲಿ ಗದ್ದೆಗೆ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ಕಾಲೇಜು ವಿದ್ಯಾರ್ಥಿನಿ ಆಶ್ನಿ ಶೆಟ್ಟಿ(20) ಎಂಬಾಕೆ ಶುಕ್ರವಾರ ಬೆಳಗ್ಗೆ ಮೃತಪಟ್ಟಿದ್ದಾರೆ.

ಕಲ್ಲಕಲಂಬಿಯ ಹರೀಶ್ ಶೆಟ್ಟಿ ಮತ್ತು ಆಶಾ ಶೆಟ್ಟಿ ದಂಪತಿಯ ಪುತ್ರಿ ಆಶ್ನಿ ಶೆಟ್ಟಿ, ಜುಲೈ 19ರಂದು ಬೆಳಗ್ಗೆ ಮನೆಯ ನಾಯಿಯನ್ನು ಹುಡುಕಿಕೊಂಡು ಗದ್ದೆ ಕಡೆಗೆ ಹೋಗಿದ್ದರು. ಈ ವೇಳೆ ನೀರಿನಲ್ಲಿ ಮುಳುಗಿದ್ದ ನಾಯಿಯನ್ನು ಕಂಡು ಅದನ್ನು ಎತ್ತಲು ಮುಂದಾದಾಗ ಏಕಾಏಕಿ ವಿದ್ಯುತ್ ಪ್ರವಹಿಸಿ ನೀರಿಗೆ ಬಿದ್ದಿದ್ದಾರೆ. ಮನೆಯವರಿಗೆ ವಿಷಯ ತಿಳಿಯುತ್ತಿದ್ದಂತೆ ತಾಯಿ ಬಂದು ಮಗಳನ್ನು ಎತ್ತಲು ಪ್ರಯತ್ನಿಸಿದಾಗ ಅವರಿಗೂ ವಿದ್ಯುತ್ ಆಘಾತವಾಗಿದೆ. ಬಳಿಕ ಸ್ಥಳೀಯರು ಮೆಸ್ಕಾಂಗೆ ಕರೆ ಮಾಡಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ ನಂತರ ಗಂಭೀರ ಸ್ಥಿತಿಯಲ್ಲಿದ್ದ ಆಶ್ನಿ ಅವರನ್ನು ಮೇಲೆತ್ತಿ ಮಂಗಳೂರಿನ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಆದರೆ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ.

ಮಂಗಳೂರಿನ ಮ್ಯಾಪ್ಸ್ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿಕಾಂ ಪದವಿ ವ್ಯಾಸಂಗ ಮಾಡುತ್ತಿದ್ದ ಆಶ್ನಿ ಚಾರ್ಟೆಡ್ ಅಕೌಂಟೆಂಟ್ ಪರೀಕ್ಷೆ ಬರೆಯಲು ಸಿದ್ಧತೆ ನಡೆಸುತ್ತಿದ್ದರು. ಪುತ್ರಿಯ ಆಕಸ್ಮಿಕ ಸಾವಿನಿಂದ ತಂದೆ-ತಾಯಿ ತೀವ್ರ ಆಘಾತಗೊಂಡಿದ್ದಾರೆ. ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆಯಲ್ಲಿ ಮೂರು ನಾಯಿ ಹಾಗೂ ಕೇರೆ ಹಾವು ಮೃತಪಟ್ಟಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net