

ಉಳ್ಳಾಲ: ಕೆಲಸದಿಂದ ಬಂದಾಗ ಮಗಳು ಮನೆಯಲ್ಲಿ ಇಲ್ಲದಿದ್ದ ಕಾರಣ ಅಸಮಾಧಾನಗೊಂಡು ತಾಯಿ ಗದರಿದ್ದನ್ನೇ ಕಾರಣವಾಗಿಟ್ಟುಕೊಂಡ ಯುವತಿ ವಿಷ ಸೇವಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಕುಂಪಲದಲ್ಲಿ ಭಾನುವಾರ ನಡೆದಿದೆ.
ತಮಿಳುನಾಡು ಮೂಲದ, ಕುಂಪಲ ಆಶ್ರಯ ಕಾಲನಿಯಲ್ಲಿರುವ ವಾಸವಿರುವ ಸೋಮನಾಥ ಎಂಬುವರ ಹಿರಿಯ ಪುತ್ರಿ ಧನ್ಯಾ(17) ಆತ್ಮಹತ್ಯೆ ಮಾಡಿಕೊಂಡವಳು. ಮಂಗಳೂರಿನ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಕಲಿಯುತ್ತಿದ್ದಳು. ಫೆ.14ರಂದು ಮಧ್ಯಾಹ್ನ ಆಕೆಯ ತಾಯಿ ಭವ್ಯಾ ಮನೆಗೆ ಬಂದಾಗ ಧನ್ಯಾ ಇರಲಿಲ್ಲ. ಮಧ್ಯಾಹ್ನ 3 ಗಂಟೆಗೆ ಬಂದಾಗ ಎಲ್ಲಿಗೆ ಹೋಗಿದ್ದೆ? ಎಂದು ತಾಯಿ ಪ್ರಶ್ನಿಸಿದ್ದು, ಗೆಳತಿ ಮನೆಗೆ ಓದಲು ತೆರಳಿದ್ದೆ ಎಂದು ಧನ್ಯಾ ತಿಳಿಸಿದ್ದಳು. ಹೋಗುವ ಮೊದಲು ಕರೆ ಮಾಡಿ ಹೇಳದಿರುವುದಕ್ಕೆ ಅಸಮಾಧಾನಗೊಂಡ ಭವ್ಯಾ ಅವರು ಮಗಳಿಗೆ ಗದರಿಸಿದ್ದು, ಬಳಿಕ ಸಮೀಪದ ಮನೆಗೆ ಕೆಲಸಕ್ಕೆ ತೆರಳಿದ್ದರು.
ತಾಯಿಯ ಗದರಿಕೆಯಿಂದ ಬೇಸತ್ತ ಧನ್ಯಾ ಮನೆಯಲ್ಲಿದ್ದ ಕೀಟನಾಶಕ ಸೇವಿಸಿ ಅಸ್ವಸ್ಥಳಾಗಿದ್ದಳು. ಆಕೆಯನ್ನ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದರೂ ಅಂಗಾಂಗ ನಿಷ್ಕ್ರಿಯಗೊಂಡು ಕೋಮಾ ಸ್ಥಿತಿಗೆ ತಲುಪಿದ್ದಳು. ಕೊನೆಗೂ ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಬೆಳಗ್ಗಿನ ಜಾವ ಮೃತಪಟ್ಟಿದ್ದಾಳೆ. ತಂದೆ, ತಾಯಿ ಮತ್ತು ಸಹೋದರನನ್ನು ಅಗಲಿದ್ದಾಳೆ.