ಶಾಲೆಯಲ್ಲಿ ಛಾವಣಿಯ ಪ್ಲಾಸ್ಟರಿಂಗ್ ಕುಸಿದು ವಿದ್ಯಾರ್ಥಿ, ಶಿಕ್ಷಕಿಗೆ ಗಾಯ

tyamgondlu'
Published on

ತ್ಯಾಮಗೊಂಡ್ಲು: ಪಟ್ಟಣದ ಅಂಬೇಡ್ಕರ್‌ನಗರ ಎ.ಕೆ.ಕಾಲನಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಛಾವಣಿಯ ಪ್ಲಾಸ್ಟರಿಂಗ್ ಕುಸಿದು ಓರ್ವ ವಿದ್ಯಾರ್ಥಿ ಹಾಗೂ ಶಿಕ್ಷಕಿ ಗಾಯಗೊಂಡಿದ್ದಾರೆ.

ಗುರುವಾರ ಮಧ್ಯಾಹ್ನ ಮಕ್ಕಳು ಬಿಸಿಯೂಟ ಮಾಡುತ್ತಿದ್ದಾಗಲೇ ಛಾವಣಿಯ ಸಿಮೆಂಟ್ ಪದರ ಕಿತ್ತು ಬಿದ್ದಿದ್ದು, ಒಂದನೇ ತರಗತಿಯ ರಘು ಮತ್ತು ಶಿಕ್ಷಕಿ ಮಹಾಲಕ್ಷ್ಮೀ ಗಾಯಗೊಂಡಿದ್ದಾರೆ.

ಸಿಮೆಂಟ್ ಪದರವು ಸಾಂಬಾರಿನ ಪಾತ್ರೆಗೆ ಬಿದ್ದಿದ್ದರಿಂದ ಕೆಲವು ವಿದ್ಯಾರ್ಥಿಗಳ ಮೇಲೆ ಬಿಸಿ ಸಾಂಬಾರು ಕೂಡ ಬಿದ್ದಿದೆ. ಹಲವು ವಿದ್ಯಾರ್ಥಿಗಳು ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ. ಗಾಯಗೊಂಡಿದ್ದ ಬಾಲಕ ಮತ್ತು ಶಿಕ್ಷಕಿಗೆ ಸ್ಥಳೀಯರು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ.

ಗ್ರಾಮ ಪಂಚಾಯಿತಿಯ 15ನೇ ಹಣಕಾಸು ಯೋಜನೆಯಡಿ ಕಳೆದ ಎರಡು ವರ್ಷದ ಹಿಂದೆ ಕಟ್ಟಡದ ಕಾಮಗಾರಿಯನ್ನು 3.99 ಲಕ್ಷ ರೂಪಾಯಿ ಮೊತ್ತದಲ್ಲಿ ಕೃಷ್ಣಮೂರ್ತಿ ಮತ್ತು ಮೂರ್ತಿ ಅನ್ನುವವರು ನಡೆಸಿದ್ದು, ಇದೀಗ ಆ ಕಾಮಗಾರಿ ಮೇಲೆ ಅನುಮಾನ ಮೂಡುವಂತಾಗಿದೆ.

ತಪಾಸಣೆ ಮಾಡಿದ್ದ ಅಭಿಯಂತ ನಿವೃತ್ತಿ ಹೊಂದಿದ್ದು, ಎರಡು ವರ್ಷದಲ್ಲೇ ಕಟ್ಟಡದ ಪ್ಲಾಸ್ಟರಿಂಗ್ ಉದುರಿ ಬಿದ್ದಿರುವುದಕ್ಕೆ ಸ್ಥಳೀಯರು ಆಕ್ರೋಶ ಹೊರ ಹಾಕಿದ್ದಾರೆ. ಅಲ್ಲದೆ ಗ್ರಾಪಂ ಅಧಿಕಾರಿಗಳು ಮತ್ತು ಗುತ್ತಿಗೆದಾರರ ಮೇಲೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಎಸ್‌ಎಸ್‌ಎಲ್‌ಸಿ ಸಿದ್ಧತಾ ಪರೀಕ್ಷೆ ಮೇಲ್ವಿಚಾರಣೆಯಲ್ಲಿರುವುದರಿಂದ ಸ್ಥಳ ಪರಿಶೀಲಿಸಿ ವರದಿ ನೀಡುವಂತೆ ಹಾಗೂ ಆ ಕಟ್ಟಡದಲ್ಲಿ ತರಗತಿ ನಡೆಸದಂತೆ ಕ್ರಮ ಕೈಗೊಳ್ಳಲು ಸಿಆರ್‌ಪಿ ಸುಕನ್ಯಾ ಅವರಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ್ ಸೂಚಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net