

ಅರಸೀಕೆರೆ: ಮಹಿಳಾ ಸಬಲೀಕರಣದಿಂದ ಮಾತ್ರವೇ ಬಲಿಷ್ಠ, ಸಶಕ್ತ ಹಾಗೂ ಸಮೃದ್ಧ ಸಮಾಜ ನಿರ್ಮಾಣ ಸಾಧ್ಯ ಎಂದು ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಹಾಗೂ ಶಾಸಕ ಕೆ.ಎಂ.ಶಿವಲಿಂಗೇಗೌಡ ಹೇಳಿದರು.
ಸಮಾಜ ಕಲ್ಯಾಣ, ಒಬಿಸಿ, ಮಹಿಳಾ ಮತ್ತು ಶಿಶು ಅಭಿವೃದ್ಧಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಸಹಯೋಗದಲ್ಲಿ ಸೋಮವಾರ ನಗರದ ವೆಂಕಟೇಶ್ವರ ಕಲಾಭವನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ಭಾಗ್ಯಲಕ್ಷ್ಮಿ ಬಾಂಡ್ ವಿತರಿಸಿ ಮಾತನಾಡಿದರು.
ಸ್ತ್ರೀಯರ ಶಕ್ತಿಯನ್ನು ಮನಗಂಡಿರುವ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ನೇತೃತ್ವದ ಸರ್ಕಾರ ಗೃಹಲಕ್ಷ್ಮಿ ಯೋಜನೆ ಜಾರಿಗೊಳಿಸಿ ಮಹಿಳೆಯರಿಗೆ ಆರ್ಥಿಕ ಬಲ ತುಂಬುವ ಕೆಲಸ ಮಾಡಿದೆ. ಅಲ್ಲದೆ ಶಕ್ತಿ ಯೋಜನೆ ಮೂಲಕ ಬಸ್‌ನಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ನೀಡಿದ್ದು, ದುಡಿಯುವ ಕೈಗಳಿಗೆ ನೆರವಿನ ಹಸ್ತ ಚಾಚಿದೆ. ಗ್ಯಾರಂಟಿ ಅನುಷ್ಠಾನ ಸಮಿತಿ ರಚಿಸಿ ಇಂತಹ ಹಲವು ಜನಪರ ಯೋಜನೆಗಳನ್ನು ಪರಿಣಾಮಕಾರಿಯಾಗಿ ತಲುಪಿಸುವ ಪ್ರಯತ್ನ ನಡೆಸುತ್ತಿದೆ ಎಂದರು.
ಮಹಿಳಾ ಸಬಲೀಕರಣದ ಹಿನ್ನೆಲೆಯಲ್ಲಿ ಹೆಣ್ಣು ಮಕ್ಕಳಿಗೆ ಭಾಗ್ಯಲಕ್ಷ್ಮಿ ಯೋಜನೆ ಬಾಂಡ್ ವಿತರಿಸುತ್ತಿದ್ದು, ಕುಟುಂಬ ಸದಸ್ಯರು ಪ್ರಯೋಜನ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಅರಸೀಕೆರೆ ವಿಧಾನಸಭಾ ಕ್ಷೇತ್ರದಲ್ಲಿ 1400ಕ್ಕೂ ಹೆಚ್ಚಿನ ಭಾಗ್ಯಲಕ್ಷ್ಮಿ ಬಾಂಡ್ ವಿತರಿಸಲಾಗುತ್ತಿದೆ. ಇದೀಗ ಸಾಂಕೇತಿಕವಾಗಿ ಶಾಸಕರು ಬಾಂಡ್ ವಿತರಿಸಿದ್ದು ಎಲ್ಲರಿಗೂ ತಲುಪಲಿದೆ ಎಂದರು.
ಪ್ರಭಾರ ಸಿಡಿಪಿಒ ಯೋಗೀಶ್, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಪರಶಿವಮೂರ್ತಿ, ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರಾದ ಜಾಜೂರು ಸಿದ್ದೇಶ್, ಪ್ರದೀಪ್ ಇತರರು ಇದ್ದರು. ನಿವೃತ್ತ ಸರ್ಕಾರಿ ನೌಕರರ ಸಂಘಕ್ಕೆ ಶಾಸಕ ಕೆ.ಎಂ.ಶಿವಲಿಂಗೇಗೌಡ ಐದು ಲಕ್ಷ ರೂ.ಚೆಕ್ ವಿತರಿಸಿದರು.